ನ್ಯೂಸ್

"ಇದೇ ಕಾರಣಕ್ಕೆ ನನಗೆ..." ಅಮೆರಿಕಕ್ಕಿಂತ ಭಾರತ ಏಕೆ ಉತ್ತಮ? ವಿಡಿಯೊದಲ್ಲಿ ಬಹಿರಂಗಪಡಿಸಿದ ಯುಎಸ್​ ಮಹಿಳೆ | America Woman

America Woman: ಭಾರತದ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇಡೀ ಜಗತ್ತಿಗೆ ವೈವಿಧ್ಯತೆ ಅಂದರೆ ಏನು ಎಂಬುದನ್ನು ತೋರಿಸಿದ ನೆಲ. ಸಂಸ್ಕೃತಿ, ಆಚರಣೆ, ಮಾನವೀಯತೆ, ಗೌರವ ಮತ್ತು ಆತಿಥ್ಯಕ್ಕೆ ಹೆಸರುವಾಸಿಯಾಗಿರುವ ಭಾರತ ಮಾತೆಯ ಭೂಮಿ ಸ್ವರ್ಗಕ್ಕಿಂತ ಮಿಗಿಲು. ವಿದೇಶಿಗರಿಗೂ ಭಾರತ ಅಚ್ಚುಮೆಚ್ಚಿನ ತಾಣ ಎಂಬುವುದರಲ್ಲಿ ಸಂದೇಹವೇ ಇಲ್ಲ. ಪ್ರತಿ ವರ್ಷ ಲಕ್ಷಾಂತರ ವಿದೇಶಿಗರು ಭಾರತಕ್ಕೆ ಬಂದು ಹೋಗುತ್ತಾರೆ. ಬಂದವರು ಇಲ್ಲಿನ ಆತಿಥ್ಯ ಕಂಡು ಮೂಕವಿಸ್ಮಿತರಾಗುತ್ತಾರೆ. ಅದಕ್ಕೆ ತಾಜಾ ಉದಾಹರಣೆ ಸದ್ಯ ವೈರಲ್​ ಆಗುತ್ತಿರುವ ವಿಡಿಯೋ.

ಭಾರತದಲ್ಲಿನ ಜೀವನದ ಬಗ್ಗೆ ಅಮೆರಿಕ ಮೂಲದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಪೋಸ್ಟ್ ಅನ್ನು ಕಂಟೆಂಟ್​​ ಕ್ರಿಯೆಟರ್​ ಕ್ರಿಸ್ಟನ್ ಫಿಶರ್ ಹಂಚಿಕೊಂಡಿದ್ದಾರೆ. ಕ್ರಿಸ್ಟನ್ ಮತ್ತು ಅವರ ಕುಟುಂಬ ನಾಲ್ಕು ವರ್ಷಗಳ ಹಿಂದೆ ಭಾರತಕ್ಕೆ ಸ್ಥಳಾಂತರಗೊಂಡಿತು. ಈಗ, ಫಿಶರ್ ಭಾರತವನ್ನು ಏಕೆ ತುಂಬಾ ಪ್ರೀತಿ ಮಾಡುತ್ತಾರೆ ಅನ್ನೋದಕ್ಕೆ ಮತ್ತೊಂದು ಕಾರಣವನ್ನು ಹಂಚಿಕೊಂಡಿದ್ದಾರೆ.

ಫಿಶರ್ ಭಾರತದಲ್ಲಿ ತನಗೆ ಇಷ್ಟವಾದ ಇನ್ನೊಂದು ವಿಷಯವನ್ನು ವಿಡಿಯೋದಲ್ಲಿ ಪರಿಚಯಿಸಿದ್ದಾರೆ. "ಭಾರತದಲ್ಲಿ ವಾಸಿಸುವುದರ ಬಗ್ಗೆ ಅತ್ಯುತ್ತಮವಾದ ವಿಷಯವೆಂದರೆ ಇಲ್ಲಿ ಒಡೆದುಹೋದ ಅಥವಾ ಹಾನಿಗೊಳಗಾದ ಯಾವುದನ್ನಾದರೂ ಸರಿಪಡಿಸಬಹುದು. ನನ್ನ ಕೆಟಲ್ ಒಡೆದುಹೋಯಿತು. ನಾನು ಅದನ್ನು ರಿಪೇರಿ ಮಾಡುವವರ ಬಳಿಗೆ ಕೊಂಡೊಯ್ದೆ. ಅವರು ಅದನ್ನು ನನಗೆ ಕೇವಲ 30 ರೂ.ಗೆ ಸರಿಪಡಿಸಿದರು. ಈಗ ಅದು ಹೊಸದಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಅಮೆರಿಕನ್ ಮಹಿಳೆ ವೀಡಿಯೊದಲ್ಲಿ ಹೇಳುತ್ತಾರೆ. ಈ ವಿಷಯದ ಬಗ್ಗೆ ಅವರು ಟಿಪ್ಪಣಿಯನ್ನು ಸಹ ಹಂಚಿಕೊಂಡಿದ್ದಾರೆ.

ಈ ರೀತಿಯ ಹಲವು ವಿಡಿಯೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

"ಅಮೆರಿಕದಲ್ಲಿ, ಏನಾದರೂ ಕೆಟ್ಟುಹೋದರೆ, ಜನರು ಹೊಸದನ್ನು ಖರೀದಿಸುತ್ತಾರೆ. ಅಲ್ಲಿ, ಹೊಸದನ್ನು ಖರೀದಿಸುವುದಕ್ಕಿಂತ ವಸ್ತುಗಳನ್ನು ದುರಸ್ತಿ ಮಾಡುವುದು ಹೆಚ್ಚು ವೆಚ್ಚವಾಗುತ್ತದೆ. ಆದರೆ ಭಾರತದಲ್ಲಿ, ನೀವು ಎಲ್ಲೆಡೆ ದುರಸ್ತಿ ಅಂಗಡಿಗಳನ್ನು ಕಾಣಬಹುದು. ಯಾವುದನ್ನಾದರೂ ಬಹಳ ಕಡಿಮೆ ವೆಚ್ಚದಲ್ಲಿ ದುರಸ್ತಿ ಮಾಡಬಹುದು. ನೀವು ಉಪಕರಣಗಳಿಂದ ಹಿಡಿದು ಬೂಟುಗಳು, ಫೋನ್‌ಗಳು, ಬಟ್ಟೆಗಳು ಮತ್ತು ಯಾವುದನ್ನಾದರೂ ದುರಸ್ತಿ ಮಾಡಬಹುದು. ಅದಕ್ಕಾಗಿಯೇ ಭಾರತವು ಅಮೆರಿಕಕ್ಕಿಂತ ಹೆಚ್ಚಿನ ಸಂಪನ್ಮೂಲಗಳನ್ನು ಹೊಂದಿದೆ" ಎಂದು ಫಿಶರ್ ಟಿಪ್ಪಣಿಯಲ್ಲಿ ಹೇಳಿದ್ದಾರೆ,(ಏಜೆನ್ಸೀಸ್).