ನ್ಯೂಸ್

26/11 ಉಗ್ರರ ದಾಳಿ ಪ್ರಕರಣ: ಅಪರಾಧಿ ತಹಾವೂರ್​​ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಯುಎಸ್​ 'ಸುಪ್ರೀಂ' ಅಸ್ತು | Tahawwur Rana

Tahawwur Rana: 2008ರ 26/11 ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಅಮೆರಿಕಾದಲ್ಲಿ ಶಿಕ್ಷೆಗೊಳಗಾದ ತಹವೂರ್​ ರಾಣಾನನ್ನು (63) ಇದೀಗ ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ.

ಉಗ್ರರ ದಾಳಿ ಹಿಂದಿದ್ದ ಮಾಸ್ಟರ್​ಮೈಂಡ್​

ಮುಂಬೈನ ತಾಜ್​ ಹೋಟೆಲ್​ ಸೇರಿದಂತೆ ಹಲವು ಪ್ರಸಿದ್ಧ ಸ್ಥಳಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಪಾಕಿಸ್ತಾನ ಮೂಲದ ಕೆನಡಾದ ಪ್ರಜೆ ರಾಣಾನನ್ನು ಭಾರತೀಯ ಅಧಿಕಾರಿಗಳು ಶೋಧಿಸುತ್ತಿದ್ದರು. ಆದರೆ, ಇಂದು ಅಮೆರಿಕ ನೆಲದಲ್ಲಿ ಭಾರತಕ್ಕೆ ರಾಜತಾಂತ್ರಿಕ ಗೆಲುವು ಸಿಕ್ಕಿದ್ದು, 14 ವರ್ಷ ಕಠಿಣ ಶಿಕ್ಷೆಗೆ ಗುರಿಯಾದ ರಾಣಾನನ್ನು ಯುಎಸ್​ ಸುಪ್ರೀಂಕೋರ್ಟ್​ ಈಗ ಭಾರತಕ್ಕೆ ಹಸ್ತಾಂತರಿಸಲು ನಿರ್ಧರಿಸಿದೆ.

ಪ್ರಸ್ತುತ ಅಪರಾಧಿ ರಾಣಾನನ್ನು ಲಾಸ್ ಏಂಜಲೀಸ್​ ಜೈಲಿನಲ್ಲಿ ಶಿಕ್ಷೆಗೆ ಒಳಪಡಿಸಲಾಗಿದೆ. ಮುಂಬೈ ದಾಳಿಯ ಪ್ರಮುಖ ವ್ಯಕ್ತಿ "ದೌದ್ ಗಿಲಾನಿ" ಎಂದೇ ಕರೆಯಲ್ಪಡುವ ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕನಾದ ಈತ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ಸಂಪರ್ಕ ಹೊಂದಿದ್ದ. ದಾಳಿಯನ್ನು ನಡೆಸುವಲ್ಲಿ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾಗೆ (LeT) ಬೆಂಬಲಿಸಲು ಪಾಕಿಸ್ತಾನದಲ್ಲಿ ಇತರರಿಗೆ ಸಹಾಯ ಮಾಡಿರುವ ಆರೋಪವೂ ಇದೆ.

ತಹವೂರ್​ನನ್ನು ತಮಗೆ ಹಸ್ತಾಂತರಿಸುವಂತೆ ಭಾರತ ಅಮೆರಿಕಾಗೆ ಮನವಿ ಮಾಡಿತ್ತು. ಇದರ ಬೆನ್ನಲ್ಲೇ ತನ್ನ ಹಸ್ತಾಂತರ ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದ ರಾಣಾ ಅರ್ಜಿಯನ್ನು ಕೋರ್ಟ್​ ಈಗ ತಿರಸ್ಕರಿಸಿದೆ. ಕೆಳ ಮತ್ತು ಫೆಡರಲ್ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟಗಳಲ್ಲಿ ಜಯ ಸಾಧಿಸಲು ವಿಫಲನಾದ ರಾಣಾ, ಈ ಹಿಂದೆ ಸ್ಯಾನ್ ಫ್ರಾನ್ಸಿಸ್ಕೋದ ಒಂಬತ್ತನೇ ಸರ್ಕ್ಯೂಟ್‌ಗಾಗಿ ಅಮೆರಿಕದ ಮೇಲ್ಮನವಿ ಕೋರ್ಟ್​ನ ಸಂಪರ್ಕಿಸಿದ್ದ. ಆದರೆ, ಅಲ್ಲಿಯೂ ಸೋಲು ಎದುರಿಸಿದ.

ಕಳೆದ ವರ್ಷ ಡಿಸೆಂಬರ್ 16ರಂದು, ಯುಎಸ್ ಸಾಲಿಸಿಟರ್ ಜನರಲ್ ಎಲಿಜಬೆತ್ ಬಿ. ಪ್ರೆಲೋಗರ್ ಅವರು ರಾಣಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುವಂತೆ ಸುಪ್ರೀಂ ಕೋರ್ಟ್​ನ ಒತ್ತಾಯಿಸಿದ್ದರು. ಇನ್ನು ಅಪರಾಧಿ ಪರ ವಕೀಲ ಜೋಶುವಾ ಎಲ್. ಡ್ರಾಟೆಲ್, ಡಿಸೆಂಬರ್ 23ರಂದು ಸರ್ಕಾರದ ನಿಲುವನ್ನು ವಿರೋಧಿಸಿ ಪ್ರಕರಣವನ್ನು ವಿಚಾರಣೆ ನಡೆಸುವಂತೆ ಸರ್ವೋಚ್ಚ ನ್ಯಾಯಾಲಯವನ್ನು ವಿನಂತಿಸಿದ್ದರು. ಆದ್ರೆ, ಅಮೆರಿಕ ಕೋರ್ಟ್​ ವಕೀಲರ ಮನವಿಯನ್ನು ತಿರಸ್ಕರಿಸಿತು. 14 ವರ್ಷಗಳ ಶಿಕ್ಷೆಯನ್ನು ವಿಧಿಸಿದ ಯುಎಸ್​ ಸುಪ್ರೀಂಕೋರ್ಟ್​, ಈಗ ಅಪರಾಧಿಯನ್ನು ಭಾರತಕ್ಕೆ ಹಸ್ತಾಂತರಿಸಲು ಸಮ್ಮತಿ ನೀಡಿದೆ. ಇದು ಭಾರತಕ್ಕೆ ಗೆಲುವು ತಂದುಕೊಟ್ಟಿದೆ,(ಏಜೆನ್ಸೀಸ್).