ಅಮೆರಿಕದಲ್ಲಿ ಗ್ರೀನ್ಕಾರ್ಡ್ ಹೊಂದಿರುವ ವಿವಿಧ ದೇಶಗಳ ಸುಮಾರು 1.3 ಕೋಟಿ ಜನ ಇದ್ದಾರೆ. ಆ ಪೈಕಿ ಭಾರತೀಯರ ಸಂಖ್ಯೆ 80 ಲಕ್ಷಕ್ಕಿಂತ ಜಾಸ್ತಿ ಇದೆ. ಅವರನ್ನು ಅಲ್ಲಿ ಲಾಫುಲ್ ಪರ್ಮನೆಂಟ್ ರೆಸಿಡೆಂಟ್ಸ್ (ಎಲ್ಪಿಆರ್) ಎಂದೇ ಕರೆಯುತ್ತಾರೆ. ಕಾನೂನುಸಮ್ಮತ ಶಾಶ್ವತ ನಿವಾಸಿಗಳು ಎಂದು ಅದರರ್ಥ. ಆದರೆ ಈ ಅರ್ಥವನ್ನು ಈಗಿನ ಅಮೆರಿಕ ಸರ್ಕಾರ ಮರೆತೇ ಹೋದಂತಿದೆ. ಏಕೆಂದರೆ, ‘ಗ್ರೀನ್ ಕಾರ್ಡ್ ಶಾಶ್ವತ ಅಲ್ಲ’ ಎಂಬ ಹೇಳಿಕೆಯನ್ನು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಶುಕ್ರವಾರ ನೀಡಿದ್ದಾರೆ.
‘ಗ್ರೀನ್ ಕಾರ್ಡ್ ಹೊಂದಿರುವವರು ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸುವ ಹಕ್ಕು ಹೊಂದಿಲ್ಲ’ ಎಂದು ವ್ಯಾನ್ಸ್ ಹೇಳಿರುವುದು ಭಾರತೀಯರೂ ಸೇರಿದಂತೆ ಅಲ್ಲಿ ನೆಲೆಸಿರುವ ಕೋಟ್ಯಂತರ ವಲಸಿಗರಲ್ಲಿ ಭಯವನ್ನು ಉಂಟು ಮಾಡಿದೆ. ಇವರೆಲ್ಲರೂ ಆ ರಾಷ್ಟ್ರದಲ್ಲಿ ಹಲವಾರು ದಶಕಗಳಿಂದ ನೆಲೆಸಿರುವವರು. ವ್ಯಾಪಾರ-ವಹಿವಾಟು, ಉದ್ಯೋಗ-ಉದ್ಯಮ ಮಾಡುತ್ತಿರುವವರು. ತೆರಿಗೆ ಪಾವತಿಸುತ್ತಿರುವವರು. ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುತ್ತಿರುವವರು. ಅವರಲ್ಲಿ ಬಹುತೇಕ ಜನರು ಅಮೆರಿಕದ ಪೌರತ್ವವನ್ನೂ ಪಡೆಯಲು ಅರ್ಹರು. ಆದರೆ ಎಷ್ಟೋ ಜನರು ತಮ್ಮ ಸ್ವದೇಶಪ್ರೇಮದಿಂದಲೋ ಅಥವಾ ಸುಮ್ಮನೆ ನಿರ್ಲಕ್ಷ್ಯಂದಲೋ ಒಟ್ಟಿನಲ್ಲಿ ಯಾವುದೋ ಒಂದು ಕಾರಣಕ್ಕೆ ಅಲ್ಲಿನ ಪೌರತ್ವವನ್ನು ಪಡೆದಿಲ್ಲ.
ಅಲ್ಲಿಯೇ ಹುಟ್ಟಿ ಬೆಳೆದ ಪ್ರಜೆಗಳಿಗೆ ಸಿಗುತ್ತಿರುವ ಎಲ್ಲ ಸೌಲಭ್ಯಗಳನ್ನೂ ಅನುಭವಿಸುತ್ತಿರುವ ಅವರು, ಸ್ಥಳೀಯ ಚುನಾವಣೆಗಳಲ್ಲಿ ಮತ ಚಲಾಯಿಸುವುದೊಂದನ್ನು ಹೊರತುಪಡಿಸಿದರೆ, ಉಳಿದಂತೆ ಎಲ್ಲ ರೀತಿಯಲ್ಲೂ ಅಲ್ಲಿನ ಪ್ರಜೆಗಳಿದ್ದಂತೆಯೇ. ಹೀಗೆ ಶಾಂತಿಯುತವಾಗಿ ತಮ್ಮ ಕೆಲಸ ತಾವು ಮಾಡುತ್ತ ಜೀವನ ಸಾಗಿಸುತ್ತಿರುವವರ ಮೇಲೆ ಅಮೆರಿಕದ ಸರ್ಕಾರ ಇದ್ದಕ್ಕಿದ್ದಂತೆಯೇ ಪ್ರಹಾರ ಮಾಡಲು ಮುಂದಾಗಿರುವುದು ಆಘಾತಕಾರಿಯಲ್ಲದೆ ಬೇರೇನೂ ಅಲ್ಲ. ಈ ತೀರ್ಮಾನ ಕೋಟ್ಯಂತರ ಭಾರತೀಯ ಕುಟುಂಬಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಇದರಿಂದ ಭಾರತೀಯರ ಮೇಲಾಗುವ ಪರಿಣಾಮಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.
ಇದೊಂದೇ ವಿಷಯವಲ್ಲ, ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಮೇಲೆ ತೆರಿಗೆ, ವಲಸೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಅನುಸರಿಸುತ್ತಿರುವ ಕ್ರಮಗಳು ಆಘಾತಕಾರಿಯಾಗಿವೆ. ಬೇರೆ ದೇಶಗಳು ಅಮೆರಿಕದ ಮೇಲೆ ಎಷ್ಟು ತೆರಿಗೆ ವಿಧಿಸುತ್ತಿವೆಯೋ ಅದರ ದುಪ್ಪಟ್ಟು ತೆರಿಗೆ ವಿಧಿಸುವ ಉಮೇದನ್ನೂ ಟ್ರಂಪ್ ಇತ್ತೀಚೆಗೆ ತೋರಿಸಿದ್ದಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಯೂರೋಪಿಯನ್ ಯೂನಿಯನ್ನ 20ಕ್ಕೂ ಹೆಚ್ಚು ದೇಶಗಳಿಂದ ಆಮದಾಗುತ್ತಿರುವ ವೈನ್, ಸ್ಪಿರಿಟ್, ಶಾಂಪೇನ್ ಮೇಲೆ ಶೇ. 200ರಷ್ಟು ತೆರಿಗೆ ವಿಧಿಸಲು ಹೊರಟಿರುವುದು! ಇಂತಹ ಕ್ರಮಗಳಿಂದ ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಉಂಟಾಗಬಹುದು ಎಂಬ ಮುನ್ಸೂಚನೆ ಈಗಾಗಲೇ ದೊರೆತಿದೆ. ಅದರ ಜತೆಜತೆಗೆ ಇಡೀ ಜಗತ್ತಿನಲ್ಲಿ ಆರ್ಥಿಕ ಏರಿಳಿತಗಳು ಕಾಣಿಸಬಹುದು. ಬೇರೆ ಬೇರೆ ದೇಶಗಳು ಇದರ ದುಷ್ಪರಿಣಾಮಕ್ಕೀಡಾಗಬಹುದು. ಈ ವಿಷಯದಲ್ಲಿ ಅಂತಾರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಿ, ಅಮೆರಿಕದ ಮೇಲೆ ಒತ್ತಡ ತರುವ ಅವಶ್ಯಕತೆ ಇದೆ.