ರಾಜ್ಯಸಭೆಯಲ್ಲಿ ಮಂಗಳವಾರ ನಡೆದ ಸಂವಿಧಾನದ ಮೇಲಿನ ಚರ್ಚೆ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹೆಸರು ಪ್ರಸ್ತಾಪಿಸಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಡಿದ ಮಾತು ವಿವಾದಕ್ಕೆ ಕಾರಣವಾಗಿದೆ. ಇದು ಅಂಬೇಡ್ಕರ್ಗಷ್ಟೇ ಅಲ್ಲ, ಇಡೀ ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಕೋಲಾಹಲ ಎಬ್ಬಿಸಿವೆ. ಈ ಕೂಡಲೇ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿವೆ. ಮತ್ತೊಂದೆಡೆ ಅಮಿತ್ ಷಾ ವಿರುದ್ಧ ಟಿಎಂಸಿ ಹಕ್ಕುಚ್ಯುತಿ ನೋಟಿಸ್ ಜಾರಿ ಮಾಡಿದೆ. ಆದರೆ, ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂದು ಅಮಿತ್ ಷಾ ಸ್ಪಷ್ಟನೆ ನೀಡಿದ್ದಾರೆ. ಗೃಹ ಸಚಿವರ ಬೆಂಬಲಕ್ಕೆ ಧಾವಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಹಲವು ಬಾರಿ ಅವಮಾನಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ: ಗೃಹ ಸಚಿವ ಅಮಿತ್ ಷಾ ಅವರು ರಾಜ್ಯಸಭೆಯಲ್ಲಿ ಮಾಡಿರುವ ಭಾಷಣದಲ್ಲಿ ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಆಗಿದೆ ಎಂದು ಆರೋಪಿಸಿ ಕಾಂಗ್ರೆಸ್ ವ್ಯಾಪಕ ಪ್ರತಿಭಟನೆ ನಡೆಸಿದೆ. ಸಂಸತ್ನ ಉಭಯ ಸದನದಲ್ಲೂ ಈ ವಿಚಾರ ಪ್ರಸ್ತಾಪವಾಗಿ ಗದ್ದಲ ಉಂಟಾಯಿತು. ಕಾಂಗ್ರೆಸ್ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದು, ಅಮಿತ್ ಷಾ ಹೇಳಿಕೆಯನ್ನು ಅವರು ಪರೋಕ್ಷವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಗೃಹ ಸಚಿವ ಅಮಿತ್ ಷಾ ಅವರು ರಾಜೀನಾಮೆ ನೀಡಬೇಕು. ಅವರು ಸಾರ್ವಜನಿಕವಾಗಿ ಮತ್ತು ಸಂಸತ್ತಿನಲ್ಲಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಸಹಿತ ಪ್ರತಿಪಕ್ಷಗಳು ಆಗ್ರಹ ಮಾಡಿವೆ. ಮಂಗಳವಾರ ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದ ಅಮಿತ್ ಷಾ, ಅಂಬೇಡ್ಕರ್ ಹೆಸರನ್ನು ತೆಗೆದುಕೊಳ್ಳುವುದು ಪ್ರತಿಪಕ್ಷಕ್ಕೆ ಫ್ಯಾಶನ್ ಆಗಿದೆ. ಕಾಂಗ್ರೆಸ್ ನಾಯಕರು ದಿನಕ್ಕೆ 100ಕ್ಕೂ ಹೆಚ್ಚು ಬಾರಿ ಅಂಬೇಡ್ಕರ್ ಹೆಸರನ್ನು ಜಪಿಸುತ್ತಾರೆ. ಅವರು ದೇವರನ್ನು ಇಷ್ಟು ಬಾರಿ ಸ್ಮರಿಸಿಕೊಂಡಿದ್ದರೆ ಮುಂದಿನ ಏಳು ಜನ್ಮದಲ್ಲೂ ಸ್ವರ್ಗಕ್ಕೆ ಹೋಗಬಹುದಿತ್ತು ಎಂದಿದ್ದರು. ಇದನ್ನು ಬುಧವಾರ ಪ್ರಸ್ತಾಪ ಮಾಡಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಅಂಬೇಡ್ಕರ್ ಅವರಿಗೆ ಷಾ ಅವಮಾನ ಮಾಡಿದ್ದಾರೆಂದು ಆರೋಪ ಮಾಡಿದರು.
ಬಾಬಾ ಸಾಹೇಬ್ ಮತ್ತು ಅವರು ಬರೆದ ಸಂವಿಧಾನವನ್ನು ಷಾ ಅವಮಾನಿಸಿದ್ದಾರೆ. ಮನುಸ್ಮೃ ಮತ್ತು ಆರ್ಎಸ್ಎಸ್ನ ಸಿದ್ಧಾಂತವೇ ಇದಕ್ಕೆ ಕಾರಣ. ಷಾ ರಾಜೀನಾಮೆ ನೀಡುವಂತೆ ಪ್ರತಿಪಕ್ಷಗಳು ಒಗ್ಗಟ್ಟಾಗಿ ಒತ್ತಾಯಿಸುತ್ತೇವೆ ಎಂದು ಕಾಂಗ್ರೆಸ್ ಮುಖ್ಯಸ್ಥರೂ ಆಗಿರುವ ಖರ್ಗೆ ಹೇಳಿದರು. ಅಂಬೇಡ್ಕರ್ ಅವರನ್ನು ಅವಮಾನಿಸಿದರೆ ದೇಶಾದ್ಯಂತ ಬೆಂಕಿ ಹೊತ್ತಿಕೊಳ್ಳುತ್ತದೆ. ಅಂಬೇಡ್ಕರ್ ದೇವರಿಗಿಂತ ಕಡಿಮೆಯೇನಲ್ಲ. ಅಂಬೇಡ್ಕರ್ ಕುರಿತ ಟೀಕೆ ಸಂಬಂಧಿಸಿ ಪ್ರದೇಶ ಕಾಂಗ್ರೆಸ್ ಸಮಿತಿಗಳು ದೇಶದಾದ್ಯಂತ ರಾಜಭವನಕ್ಕೆ ಮೆರವಣಿಗೆ ನಡೆಸಲಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ವಿರೋಧ ಪಕ್ಷಗಳ ಷಡ್ಯಂತ್ರ ಎಂದ ಪ್ರಧಾನಿ: ಅಂಬೇಡ್ಕರ್ ಅವರಿಗೆ ಅವಮಾನವಾಗಿದೆ ಎಂಬ ಕಾಂಗ್ರೆಸ್ ಆರೋಪವನ್ನು ಪ್ರಧಾನಿ ನರೇಂದ್ರ ಮೋದಿ ತಳ್ಳಿಹಾಕಿದ್ದಾರೆ. ವಿರೋಧ ಪಕ್ಷದ ದುಷ್ಕೃತ್ಯಗಳು, ಹೊಲಸು ರಾಜಕೀಯ ಮತ್ತು ದುರುದ್ದೇಶಪೂರಿತ ಸುಳ್ಳುಗಳನ್ನು ಮರೆಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ ಮತ್ತು ಅದರ ಕರಾಳ ಇತಿಹಾಸವನ್ನು ಗೃಹ ಸಚಿವರು ಬಹಿರಂಗಪಡಿಸಿದ್ದಾರೆ. ಸದನದಲ್ಲಿ ಪ್ರಸ್ತುತಪಡಿಸಿದ ಸತ್ಯಗಳಿಂದ ಕಾಂಗ್ರೆಸ್ ನಾಯಕರು ದಿಗ್ಭ›ಮೆ ಗೊಂಡಿದ್ದಾರೆ. ಅದಕ್ಕಾಗಿಯೇ ಅವರು ಈಗ ಹೊಸ ನಾಟಕದಲ್ಲಿ ತೊಡಗಿದ್ದಾರೆ. ಜನರಿಗೆ ಸತ್ಯ ತಿಳಿದಿದೆ. ಅಂಬೇಡ್ಕರ್ ಅವರಿಗೆ ಸರ್ಕಾರ ಸಂಪೂರ್ಣ ಗೌರವ ನೀಡಿದೆ ಎಂದು ಪ್ರಧಾನಿ ಹೇಳಿದ್ದಾರೆ. ನೆಹರು-ಗಾಂಧಿ ಕುಟುಂಬವನ್ನು ಉಲ್ಲೇಖಿಸಿದ ಅವರು, ಒಂದು ಕುಟುಂಬದ ನೇತೃತ್ವದ ಪಕ್ಷವು ಅಂಬೇಡ್ಕರ್ ಅವರ ಪರಂಪರೆಯನ್ನು ಅಳಿಸಿಹಾಕಲು ಎಲ್ಲ ಯತ್ನಗಳನ್ನು ಮಾಡಿದೆ. ಎಸ್ಸಿ/ಎಸ್ಟಿ ಸಮುದಾಯಗಳನ್ನು ಅವಮಾನಿಸಲು ಸಾಧ್ಯವಿರುವ ಎಲ್ಲಾ ಕೊಳಕು ತಂತ್ರಗಳನ್ನು ಮಾಡಿದೆ ಎಂದು ಅವರು ದೂರಿದ್ದಾರೆ. ಅಂಬೇಡ್ಕರ್ ಅವರನ್ನು ಒಂದಲ್ಲ ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಲಾಯಿತು. ಅವರ ವಿರುದ್ಧ ಪ್ರಚಾರ ಮಾಡಲಾಯಿತು. ನಂತರ ಕಾಂಗ್ರೆಸ್ ಆಡಳಿತಕ್ಕೆ ಬಂದಾಗ ಭಾರತ ರತ್ನ ನೀಡದೇ ಮತ್ತೆ ಅಪಮಾನ ಮಾಡಲಾಯಿತು. ಸಂಸತ್ನಲ್ಲಿ ಅವರ ಭಾವಚಿತ್ರಕ್ಕೂ ಪ್ರಮುಖ ಸ್ಥಾನ ನೀಡಲಾಗಿಲ್ಲ. ಕಾಂಗ್ರೆಸ್ ಪಾಪಗಳ ಪಟ್ಟಿ ಇನ್ನೂ ಸಾಕಷ್ಟಿದೆ. ಆದರೆ ನೂತನ ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸಿರುವ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಪ್ರಧಾನಿ ಹೇಳಿದರು. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಎಸ್ಸಿ/ಎಸ್ಟಿ ಸಮುದಾಯದ ಜನರ ಹತ್ಯಾಕಾಂಡವೇ ನಡೆದಿವೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ: ಸಚಿವ ಅಮಿತ್ ಷಾ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸಹಿತ ಇಂಡಿಯಾ ಒಕ್ಕೂಟದ ಹಲವಾರು ನಾಯಕರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಬಾಬಾ ಸಾಹೇಬ್ ಸಂವಿಧಾನದ ಶಿಲ್ಪಿ. ದೇಶಕ್ಕೆ ದಿಕ್ಕು ತೋರಿಸಿದ ಮಹಾನ್ ವ್ಯಕ್ತಿ. ಅವರ ಅವಮಾನವನ್ನು ದೇಶ ಸಹಿಸುವುದಿಲ್ಲ. ಗೃಹ ಸಚಿವರು ಕ್ಷಮೆ ಕೇಳಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಕೂಡ ಇದ್ದರು.
ಷಾ ಹೇಳಿದ್ದೇನು..?: ‘ಕಾಂಗ್ರೆಸ್ಸಿಗರಿಗೆ ಅಂಬೇಡ್ಕರ್ ಹೆಸರು ಪಠಿಸುವುದು ಈಗ ವ್ಯಸನ ಆಗಿ ಬಿಟ್ಟಿದೆ. ಅಂಬೇಡ್ಕರ್ ಬದಲು 100 ಬಾರಿ ದೇವರನ್ನು ಜಪಿಸಿದ್ದರೆ ಏಳೇಳು ಜನ್ಮದಲ್ಲೂ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು. ಆದರೆ, ಅಂಬೇಡ್ಕರ್ ಕುರಿತು ನಿಮ್ಮ (ಕಾಂಗ್ರೆಸ್) ಭಾವನೆ ಏನೆಂಬುದನ್ನು ನಾನು ಹೇಳುತ್ತೇನೆ. ನೆಹರು ಅವರ ಮೊದಲ ಸಚಿವ ಸಂಪುಟಕ್ಕೆ ಅಂಬೇಡ್ಕರ್ ಮತ್ತು ರಾಜಾಜಿ ರಾಜೀನಾಮೆ ನೀಡಿದ್ದರು. ಆ ಸಂದರ್ಭದಲ್ಲಿ ಇಬ್ಬರು ದಿಗ್ಗಜರ ರಾಜೀನಾಮೆ ಬಗ್ಗೆ ಕಳವಳ ವ್ಯಕ್ತಪಡಿಸಿ ಬಿ.ಸಿ. ರಾಯ್ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ, ರಾಜಾಜಿ ರಾಜೀನಾಮೆ ನೀಡಿದ್ದು ನಮಗೆ ಸ್ವಲ್ಪ ನಷ್ಟ ತರಲಿದೆ. ಆದರೆ, ಅಂಬೇಡ್ಕರ್ ರಾಜೀನಾಮೆಯಿಂದ ಸಂಪುಟ ದುರ್ಬಲ ಆಗುವುದಿಲ್ಲ ಎಂದು ನೆಹರೂ ಪ್ರತಿಕ್ರಿಯಿಸಿದ್ದರು. ಆದರೆ, ಈಗ ಅಂಬೇಡ್ಕರ್ಗೆ ದೊಡ್ಡ ಸಂಖ್ಯೆಯ ಬೆಂಬಲಿಗರು ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿಗರು ವೋಟ್ ಬ್ಯಾಂಕ್ ಕಾರಣಕ್ಕೆ ಅಂಬೇಡ್ಕರ್ ಜಪ ಮಾಡುತ್ತಿದ್ದಾರೆ’ ಎಂದು ಅಮಿತ್ ಷಾ ರಾಜ್ಯಸಭೆಯಲ್ಲಿ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದರು.
ಷಾ ಸ್ಪಷ್ಟನೆ ಏನು?: ಕಾಂಗ್ರೆಸ್ ನಾನು ಹೇಳಿದ ಸತ್ಯವನ್ನು ತಪ್ಪಾಗಿ ವ್ಯಾಖ್ಯಾನಿಸಿದೆ. ಸಂವಿಧಾನ ವಿರೋಧಿ ಪಕ್ಷವು ತನ್ನ ಟೀಕೆಗಳನ್ನು ತಪ್ಪಾಗಿ ಪಸ್ತುತಪಡಿಸುತ್ತಿದೆ. ನನ್ನ ವಿರುದ್ಧ ಸಮಾಜದಲ್ಲಿ ಸುಳ್ಳು ನಿರೂಪಣೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಅಮಿತ್ ಷಾ ಬುಧವಾರ ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ಗೆ ಮೋದಿ ತಿರುಗೇಟು
ಸಂವಿಧಾನ ಶಿಲ್ಪಿ ಅಂಬೇಡ್ಕರ್ ದೇಶಕ್ಕೆ ಹೊಸ ದಿಕ್ಕು ತೋರಿಸಿದವರು. ಅಂಬೇಡ್ಕರ್ಗೆ ಹಾಗೂ ಅವರು ರಚಿಸಿರುವ ಸಂವಿಧಾನಕ್ಕೆ ಅವಮಾನ ಮಾಡಿದರೆ ದೇಶ ಸಹಿಸಲ್ಲ. ತಕ್ಷಣ ಗೃಹ ಸಚಿವರು ಕ್ಷಮೆಯಾಚಿಸಬೇಕು.
| ರಾಹುಲ್ ಗಾಂಧಿ ಲೋಕಸಭೆ ವಿಪಕ್ಷ ನಾಯಕ
ನಿಮ್ಮ ಮಾತಿನಿಂದ ನಮಗೆ ಆಶ್ಚರ್ಯವಾಗಿಲ್ಲ, ನಮಗೆ ಇದು ಗೊತ್ತಿತ್ತು. ಸಂಸತ್ನಲ್ಲಿ ನೀವು ಆಡಿದ ಮಾತಿನಿಂದ ಇಡೀ ದೇಶಕ್ಕೆ ನಿಮ್ಮ ಅಂತರಂಗದ ಅರಿವಾಗಿದೆ. ಬಾಬಾಸಾಹೇಬ್ ಅವರು ಕೊಟ್ಟ ಸಂವಿಧಾನದಡಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ಸಂಸತ್ನಲ್ಲಿ ನಿಂತು ಅವರ ಸ್ಮರಣೆಯನ್ನು ವ್ಯಸನ ಎಂದು ತುಚ್ಛೀಕರಿಸುವ ನಿಮ್ಮ ದಾಷ್ಟರ್್ಯಕ್ಕೆ ಶಹಬ್ಬಾಸ್ ಅನ್ನಲೇಬೇಕು.
| ಸಿದ್ದರಾಮಯ್ಯ ಮುಖ್ಯಮಂತ್ರಿ
ಅಂಬೇಡ್ಕರ್ ಹಾದಿಯನ್ನು ಕಾಂಗ್ರೆಸ್ ತನ್ನ ಕೊಳಕು ಮನಸ್ಥಿತಿಯಿಂದ ಸಾಧ್ಯವಾದ ಸಂದರ್ಭದಲ್ಲೆಲ್ಲ ನಾಶಗೊಳಿಸುವ ಮೂಲಕ ಪರಿಶಿಷ್ಟ ಜಾತಿ, ಪಂಗಡವನ್ನು ಅಮಾನಿಸಿದೆ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನಿರಾಕರಿಸಿದ್ದಲ್ಲದೆ, ಎರಡು ಬಾರಿ ಚುನಾವಣೆಯಲ್ಲಿ ಅವರನ್ನು ಸೋಲಿಸಿತ್ತು.
| ನರೇಂದ್ರ ಮೋದಿ ಪ್ರಧಾನಿ
ನನ್ನ ಹೇಳಿಕೆಗಳನ್ನು ತಿರುಚಿರುವ ಕಾಂಗ್ರೆಸ್, ದುರುದ್ದೇಶಪೂರಿತ ಪ್ರಚಾರವನ್ನು ಪ್ರಾರಂಭಿಸಿದೆ. ಈ ಮೂಲಕ ಜನರನ್ನು ದಾರಿ ತಪ್ಪಿಸಿ, ಗೊಂದಲ ಮೂಡಿಸುವುದು ಅದರ ಉದ್ದೇಶ. ಸಂವಿಧಾನದ ಶಿಲ್ಪಿಯನ್ನು ಅವಮಾನಿಸಲು ಕನಸಿನಲ್ಲೂ ಯೋಚಿಸುವುದಿಲ್ಲ.
| ಅಮಿತ್ ಷಾ ಕೇಂದ್ರ ಗೃಹ ಸಚಿವ