ಚಂಡೀಗಢ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ಕಿಚ್ಚು ದಿನೇದಿನೆ ಹೆಚ್ಚಾಗುತ್ತಲೇ ಇದೆ. ಪಂಜಾಬ್ನಲ್ಲಂತೂ ಹೋರಾಟದ ಕಿಚ್ಚು ಹೆಚ್ಚೇ ಇದೆ. ಮುಖ್ಯಮಂತ್ರಿ ಅಮರೇಂದರ್ ಸಿಂಗ್ ಅವರ ಸರ್ಕಾರವೂ ಹೋರಾಟಕ್ಕೆ ಸಾಥ್ ನೀಡಿದ್ದು, ಇದೀಗ ಮೊದಲನೇ ಬಾರಿಗೆ ರೈತ ಹೋರಾಟಗಾರರ ವಿರುದ್ಧ ಸಿಎಂ ಮುನಿಸಿಕೊಂಡಿದ್ದಾರೆ. ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಇದನ್ನೂ ಓದಿ: ಮದ್ವೆಯಾದ ಎರಡೇ ತಿಂಗಳಿಗೆ 51 ವರ್ಷದ ಪತ್ನಿಗೆ ಸಾವಿನ ದಾರಿ ತೋರಿದ 29ರ ಪತಿ: ಕೊಲೆ ಹಿಂದೆ ಭಯಾನಕ ಸಂಚು!
ಕೃಷಿ ಕಾಯ್ದೆಗಳಿಂದ ರೈತರ ಬದಲಾಗಿ ಬಂಡವಾಳಶಾಹಿಗಳಿಗೆ ಸಹಾಯವಾಗಲಿದೆ ಎಂದು ರೈತರು ದೂರುತ್ತಿದ್ದಾರೆ. ಮುಕೇಶ್ ಅಂಬಾನಿಯಂತಹ ದೊಡ್ಡ ದೊಡ್ಡ ವ್ಯವಹಾರಸ್ಥರಿಗೆ ಈ ಕಾಯ್ದೆಗಳು ಲಾಭ ಮಾಡಿಕೊಡಲಿವೆ ಎಂದು ದೂರಲಾಗುತ್ತಿದೆ. ಅದೇ ಹಿನ್ನೆಲೆಯಲ್ಲಿ ಮುಕೇಶ್ ಅಂಬಾನಿ ಮತ್ತು ಅವರ ಸಂಸ್ಥೆಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿರುವ ರೈತ ಹೋರಾಟಗಾರರು, ಜಿಯೋ ಸಿಮ್ ತ್ಯಜಿಸುವುದರ ಜತೆಗೆ ಜಿಯೋ ಮೊಬೈಲ್ ಟವರ್ಗಳಿಗೂ ಹಾನಿ ಮಾಡಲಾರಂಭಿಸಿದ್ದಾರೆ.
ಪಂಜಾಬ್ ರಾಜ್ಯವೊಂದರಲ್ಲಿ 21,306 ಟವರ್ಗಳಿವೆ. ಅದರಲ್ಲಿ 1,561 ಟವರ್ಗಳನ್ನು ರೈತರು ಹಾಳು ಮಾಡಿದ್ದಾರೆ. ಅಲ್ಲಿನ ಕೇಬಲ್ಗಳನ್ನು ಕಟ್ ಮಾಡಿ, ಜನರೇಟರ್ಗಳನ್ನು ಕದ್ದು ಟವರ್ ಕೆಲಸ ಮಾಡದಂತೆ ಮಾಡಲಾಗಿದೆ. ಆದರೆ ಇದರಿಂದಾಗಿ ರಾಜ್ಯದ ಜನತೆಗೆ ಸಾಕಷ್ಟು ತೊಂದರೆ ಉಂಟಾಗಿದೆ. ಸಾರ್ವಜನಿಕ ಆಸ್ಥಿಯನ್ನು ಹಾನಿ ಮಾಡುತ್ತಿರುವುದನ್ನು ತಾವು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಅಮರೇಂದರ್ ಸಿಂಗ್ ಹೇಳಿದ್ದಾರೆ. ಈ ರೀತಿ ಕೆಲಸ ಮಾಡುತ್ತಿರುವ ಹೋರಾಟಗಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಈವರೆಗೆ ಹಾಳು ಮಾಡಲಾದ ಟವರ್ಗಳಲ್ಲಿ 433 ಟವರ್ಗಳನ್ನು ಸರಿಪಡಿಸಲಾಗಿದೆ. ಟವರ್ ಹಾಳು ಮಾಡಿದ್ದರಿಂದಾಗಿ ಬ್ಯಾಂಕಿಗ್ ಸೇವೆ, ವರ್ಕ್ ಫ್ರಂ ಹೋಂ ನಲ್ಲಿದ್ದವರು ಮತ್ತು ಆನ್ಲೈನ್ ತರಗತಿಗೆ ಹಾಜರಾಗುತ್ತಿದ್ದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದಾಗಿ ಹೇಳಲಾಗಿದೆ. (ಏಜೆನ್ಸೀಸ್)