ನ್ಯೂಸ್

ಐಐಟಿ ಇಂಜಿನಿಯರಿಂಗ್​​ ಪದವೀಧರ ಈಗ ಭಿಕ್ಷುಕ! ವಿದೇಶದಲ್ಲಿ ವ್ಯಾಸಂಗ ಮಾಡಿದವ ಬೀದಿಗೆ ಬಂದಿದ್ದೇಗೆ?

ಭೋಪಾಲ್​: ಪಾರಿನ್​ ರಿಟರ್ನ್​ ವಿದ್ಯಾರ್ಥಿಗಳನ್ನು ಸಮಾಜ ನೋಡುವ ದೃಷ್ಟಿಯೇ ಬೇರೆ. ಅವರಿಗೆ ಸಿಗುವ ಗೌರವ ಬೇರೆ ವಿದ್ಯಾರ್ಥಿಗಳಿಗೆ ಸಿಗುವುದು ಕಷ್ಟ. ಆದರೆ ಇಲ್ಲೊಬ್ಬ ಫಾರಿನ್​ ರಿಟರ್ನ್​ ವಿದ್ಯಾರ್ಥಿ ಮಾತ್ರ ತೀರಾ ಹೀನಾಯ ಸ್ಥಿತಿಯಲ್ಲಿದ್ದಾನೆ. ಎಲ್ಲವನ್ನೂ ಕಳೆದುಕೊಂಡ ಆತ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ. ಇದೀಗ ಆತನನ್ನು ರಕ್ಷಣೆ ಮಾಡಲಾಗಿದೆ.

ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಸುಮಾರು 90 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ರಸ್ತೆ ಬದಿ ಭಿಕ್ಷೆ ಬೇಡುತ್ತ ಕುಳಿತಿದ್ದ. ಆತನನ್ನು ಒಂದು ಸ್ವಯಂ ಸೇವಕ ಸಂಸ್ಥೆಯವರು ಮಾತನಾಡಿಸಿದ್ದಾರೆ. ಆಗ ವೃದ್ಧ ಇಂಗ್ಲೀಷ್​ನಲ್ಲೇ ಅವರಿಗೆ ಉತ್ತರ ನೀಡಿದ್ದಾನೆ. ಅದೂ ಕೂಡ ಮಾಮೂಲಿ ಇಂಗ್ಲಿಷ್​ ಅಲ್ಲದೆ ಫಾರಿನ್​ ಶೈಲಿಯಲ್ಲೇ ಮಾತನಾಡಿದ ಆತನನ್ನು ಕಂಡು ಅನುಮಾನ ಬಂದ ಸಂಸ್ಥೆಯವರು ಆತನ ಮೂಲ ಪತ್ತೆಗೆ ಮುಂದಾಗಿದ್ದಾರೆ.

ಈಗ ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿರುವ ವೃದ್ಧನ ಹೆಸರು ಸುರೇಂದ್ರ ವಸಿಷ್ಠ. 1969ರಲ್ಲಿ ಐಐಟಿ ಖಾನ್ಪುರದಿಂದ ಮೆಕಾನಿಕಲ್​ ಇಂಜಿನಿಯರಿಂಗ್​ ಪದವಿ ಪಡೆದ ಆತ ನಂತರ 1972ರಲ್ಲಿ ಲಂಡನ್​ನಲ್ಲಿ ಎಲ್​ಎಲ್​ಎಂ ಪದವಿ ಪಡೆದಿದ್ದಾನೆ. ಈತನ ತಂದೆ ಜೆಸಿ ಮಿಲ್​ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನುವ ಮಾಹಿತಿ ದೊರೆತಿದೆ. ಆದರೆ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿರುವ ಈತ ಬೀದಿಗೆ ಬಂದಿದ್ದು ಹೇಗೆ ಎನ್ನುವುದು ಮಾತ್ರ ತಿಳಿದುಬಂದಿಲ್ಲ. ಸಂಸ್ಥೆಯವರು ಸುರೇಂದ್ರನನ್ನು ರಕ್ಷಿಸಿದ್ದು, ಚಿಕಿತ್ಸೆ ನೀಡಿಸುತ್ತಿದ್ದಾರೆ. ಈತನ ಕುಟುಂಬಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ ಎನ್ನಲಾಗಿದೆ.

ಕೆಲ ವಾರಗಳ ಹಿಂದೆ ಇದೇ ಸಂಸ್ಥೆಯವರು ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಮಾಜಿ ಪೊಲೀಸ್​ ಅಧಿಕಾರಿಯೊಬ್ಬರನ್ನು ರಕ್ಷಿಸಿದ್ದರು. ಆ ವ್ಯಕ್ತಿ ಇದೀಗ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)