ನವದೆಹಲಿ: ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇರೆಗೆ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಹಳೇ ಕೇಸೊಂದರ ವಿಚಾರಣೆಗಾಗಿ ಕರೆಸಿದ್ದ ಪೊಲೀಸರು ಬಳಿಕ ಬಂಧಿಸಿದ್ದರು.
ದೆಹಲಿಯ ವಿಶೇಷ ದಳದ ಪೊಲೀಸರು 2022ರ ಕೇಸ್ವೊಂದಕ್ಕೆ ಸಂಬಂಧಿಸಿದಂತೆ ಜುಬೇರ್ನನ್ನು ವಿಚಾರಣೆಗೆ ಕರೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸದ ಹಾಗೆ ಹೈಕೋರ್ಟ್ನಿಂದ ಸೂಚನೆ ಪಡೆದಿದ್ದಾಗ್ಯೂ ಜುಬೇರ್ ಬಂಧನವಾಗಿದೆ. ಅಂದರೆ, ಬೇರೆ ಕೇಸೊಂದರ ಎಫ್ಐಆರ್ ಮೇರೆಗೆ ಪೊಲೀಸರು ಬಂಧಿಸಿದ್ದಾಗಿ ಹೇಳಿದ್ದಾರೆಂದು ಆಲ್ಟ್ ನ್ಯೂಸ್ನ ಇನ್ನೊಬ್ಬ ಸಹ ಸಂಸ್ಥಾಪಕ ಪ್ರತೀಕ್ ಸಿನ್ಹಾ ತಿಳಿಸಿದ್ದಾರೆ.
ವೈದ್ಯಕೀಯ ತಪಾಸಣೆ ಬಳಿಕ ಜುಬೇರ್ನನ್ನು ಗುಪ್ತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಎಲ್ಲಿಗೆ ಎಂದು ಜುಬೇರ್ ವಕೀಲರಿಗೆ ಅಥವಾ ನನಗೂ ಮಾಹಿತಿ ನೀಡಿಲ್ಲ ಎಂದು ಸಿನ್ಹಾ ಹೇಳಿಕೊಂಡಿದ್ದಾರೆ. ಇನ್ನೊಂದೆಡೆ 2022ರಲ್ಲಿ ಜುಬೇರ್ ಮಾಡಿದ್ದ ಟ್ವೀಟ್, ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಟ್ವಿಟರ್ ಬಳಕೆದಾರರು ನೀಡಿದ್ದ ದೂರಿನ ಮೇರೆಗೆ ಬಂಧಿಸಲಾಗಿದೆ ಎಂದು ಡಿಸಿಪಿ ಕೆಪಿಎಸ್ ಮಲ್ಹೋತ್ರಾ ತಿಳಿಸಿದ್ದಾರೆ.