ಆಂಧ್ರಪ್ರದೇಶ: ಈ ವರ್ಷ ತೆರೆಕಾಣಲಿರುವ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಟಾಲಿವುಡ್ನ ಐಕಾನ್ ಸ್ಟಾರ್, ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ (Allu Arjun) ಅಭಿನಯದ ‘ಪುಷ್ಪ 2’ (Pushpa 2) ಸಿನಿಮಾ ಸದ್ಯ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದ್ದು, ಬಿಡುಗಡೆಗೂ ಮುನ್ನವೇ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ಇನ್ನು ಈ ಮಧ್ಯೆ ಹೊಸ ಪೋಸ್ಟರ್ ಮೂಲಕ ಸಿನಿಮಾದ ಅಧಿಕೃತ ರಿಲೀಸ್ ದಿನಾಂಕವನ್ನು ಘೋಷಿಸಿರುವ ಚಿತ್ರತಂಡ, ಇದೀಗ ಚಿತ್ರಕ್ಕೆ ಮತ್ತೊಂದು ಹೊಸ ಆಯಾಮ ಕೊಡಲು ಮುಂದಾಗಿದೆ ಎಂಬ ವದಂತಿಗಳು ಸದ್ಯ ಜಾಲತಾಣವನ್ನು ಸುತ್ತುವರೆದಿದೆ.
ಸುಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ 'ಪುಷ್ಪ 2' ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾವನ್ನು ಅತ್ಯಾಧುನಿಕ ತಂತ್ರಜ್ಞಾನದ ಡಾಲ್ಬಿ ವಿಷನ್ ಮಾದರಿಯಲ್ಲಿ ಬಿಡುಗಡೆ ಮಾಡಲು ಇದೀಗ ಚಿತ್ರತಂಡ ದೊಡ್ಡ ಯೋಜನೆ ಹಾಕಿಕೊಂಡಿದೆ ಎಂದು ಸಿನಿ ಮೂಲಗಳು ಮಾಹಿತಿ ಹಂಚಿಕೊಂಡಿವೆ. ಈ ಕುರಿತು ಜಾಲತಾಣಗಳಲ್ಲಿಯೂ ಸುದ್ದಿಗಳು ಹರಿದಾಡುತ್ತಿವೆ.
ಅಕಸ್ಮಾತ್ ಇದು ನಿಜವಾಗಿದ್ದಲ್ಲಿ, ಈ ಹಿಂದೆ ತೆರೆಕಂಡ ಎಸ್.ಎಸ್. ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಹೆಜ್ಜೆಯನ್ನೇ 'ಪುಷ್ಪ 2' ಅನುಸರಿಸಲಿದೆ. ಏಕೆಂದರೆ, ಈ ಮಾದರಿಯಲ್ಲಿ ಬಿಡುಗಡೆಯಾದ ಮೊದಲ ತೆಲುಗು ಚಿತ್ರ ಎಂಬ ಖ್ಯಾತಿಗೆ ಆರ್ಆರ್ಆರ್ ಪಾತ್ರವಾಗಿದೆ. ಈಗ ಅಲ್ಲು ಅರ್ಜುನ್ ಸಿನಿಮಾ ಕೂಡ ಇದೇ ಫಾರ್ಮೆಟ್ನಡಿ ರಿಲೀಸ್ ಆದರೆ, ಈ ಮಾದರಿಯಲ್ಲಿ ಬಿಡುಗಡೆಗೊಂಡ ಎರಡನೇ ತೆಲುಗು ಚಿತ್ರ ಇದಾಗಲಿದೆ,(ಏಜೆನ್ಸೀಸ್).