ಸರ್ಕಾರಿ ಭೂಮಿ ರಕ್ಷಣೆ ಕಾರ್ಯದಲ್ಲಿ ನಿಷ್ಠೆಯಿರಲಿ: ನ್ಯಾಯಾಧೀಶ ಬಿ.ಎ ಪಾಟೀಲ್ ಸೂಚನೆ

20 Shashi 01 (1)
Published on

ರಾಯಚೂರು: ಗ್ರಾಮ ಲೆಕ್ಕಾಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಿದಾಗ ಮಾತ್ರ ಸರ್ಕಾರಿ ಭೂಮಿ ಒತ್ತುವರಿ ತಡೆಯಲು ಸಾಧ್ಯವೆಂದು ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಎ ಪಾಟೀಲ್ ಹೇಳಿದರು.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಬಗ್ಗೆ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು.

ಕಂದಾಯ ಇಲಾಖೆ ಮಾತೃ ಇಲಾಖೆಯಾಗಿದ್ದು, ಇಲ್ಲಿನ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಸರ್ಕಾರದ ಭೂಮಿ ರಕ್ಷಣೆ ಮಾಡುವ ಕಾರ್ಯವನ್ನು ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ನಿಷ್ಠೆಯಿಂದ ನಿರ್ವಹಿಸಬೇಕು ಎಂದು ತಿಳಿಸಿದರು.

ಸರ್ಕಾರಿ ಭೂಮಿ ಒತ್ತುವರಿಯಾದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳೇ ದೂರು ಸಲ್ಲಿಸಬೇಕೆಂಬ ನಿಯಮವೇನಿಲ್ಲ. ಸಾರ್ವಜನಿಕರು ಯಾರಾದರೂ ದೂರು ಸಲ್ಲಿಸಬಹುದಾಗಿದೆ. ಜನರಿಗೆ ಕಾನೂನಿನ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯವಾಗಬೇಕಿದೆ ಎಂದು ತಿಳಿಸಿದರು.

ಸರ್ಕಾರದ ಭೂಮಿಗಳು ಹೆಚ್ಚಾಗಿ ಒತ್ತುವರಿಯಾಗುತ್ತಿದ್ದು, ಸರ್ಕಾರದಿಂದ ಸ್ಮಶಾನಕ್ಕೂ ಭೂಮಿ ನೀಲು ಆಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಸರ್ಕಾರಿ ಜಮೀನುಗಳನ್ನು ಸರ್ವೆ ಮಾಡಿ, ಅತಿಕ್ರಮಣವಾದ ಜಾಗಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಇದೇ ವೇಳೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಮಾರುತಿ ಬಗಾಡೆ ಮಾತನಾಡಿ, ಸರ್ಕಾರದ ಭೂಮಿ ಒತ್ತುವರಿ ಎಂಬುವುದು ಕೇವಲ ಜನಪ್ರತಿನಿಧಿಗಳಿಗೆ ಸೀಮಿತವಾಗಿಲ್ಲ. ಒತ್ತುವರಿ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಭಾಗಿಯಾಗುತ್ತಿದ್ದಾರೆ. ನಗರದ ಮಾವಿನಕೆರೆ ಭೂಮಿ ಒತ್ತುವರಿ ಕುರಿತು ನ್ಯಾಯಲಯವು ನಿರ್ದೇಶನ ನೀಡಿದ್ದು, ಕೂಡಲೇ ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಿ, ಒತ್ತುವರಿಯಾದ ಭೂಮಿಯನ್ನು ವಶ ಪಡಿಸಿಕೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ನವೀನ್, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಎ ಸಾತ್ವಿಕ್, ಡಿಸಿ ಕೆ.ನಿತೀಶ, ಕಂದಾಯ ಸದಸ್ಯರಾದ ಎಸ್.ಪಾಲಯ್ಯ, ಕೆ.ಹೆಚ್ ಅಶ್ವತ್ಥ ನಾರಾಯಣ, ಎಸಿ ಗಜಾನನ ಬಾಲೆ, ಎಡಿಸಿ ಶಿವಾನಂದ ಭಜಂತ್ರಿ, ಎಎಸ್ಪಿ ಶಿವುಕುಮಾರ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net