ಇದೆ ಕಣಾ ಶಿವಲಿಂಗಭಕ್ತಿಯ/ಹೃದಯವನು ಸಾಧಿಸುವ ಪರಿ ಭಾ/ವದಲಿ ನೆಳೆನಟ್ಟಾಲಿಯಲಿ ನಿಬ್ಬೆರಗಿನಂದದಲಿ/ಇದನು ಸಾಧಿಸದನ್ಯವ್ಯವಸಾ/ಯದಲಿ ಸಾವೊಡೆ ಕಬ್ಬಿನಿಚ್ಛೆಗೆ/ಬಿದಿರ ಮೆಲುವಂತಪ್ಪುದೈ ಗೊಗ್ಗಯ್ಯ ಕೇಳೇಂದ. ‘‘ಅಯ್ಯ ಗೊಗ್ಗಯ್ಯ, ಸ್ವಲ್ಪ ತಾಳ್ಮೆಯಿಂದ ನನ್ನ ಮಾತನ್ನು ಕೇಳು. ಇದು ಶಿವಲಿಂಗಭಕ್ತಿಯ ತಿರುಳನ್ನು ಸಾಧಿಸುವ ರೀತಿ. ನಮ್ಮ ದೃಷ್ಟಿ ಶಿವಭಾವದಲ್ಲಿಯೇ ನೆಟ್ಟಿರಬೇಕು. ರೆಪ್ಪೆಯನ್ನು ಮಿಟುಕಿಸದೆ ಏಕದೃಷ್ಟಿಯಲ್ಲಿ ಇರಿಸಬೇಕು. ಸಾಧಕನು ಈ ಬಗೆಯಲ್ಲಿ ಸಾಧಿಸಬೇಕು. ಇತರ ಮಾರ್ಗಗಳನ್ನು ಹಿಡಿದರೆ ಏನು ಪ್ರಯೋಜನ? ಸಿಹಿಯಾದ ಕಬ್ಬನ್ನು ಮೆಲ್ಲದೆ, ಬಿದಿರನ್ನು ಮೆಲ್ಲುವಂತೆ ಆಗುತ್ತದೆ ಅಷ್ಟೆ ’ ಎಂದು ಗೊಗ್ಗಯ್ಯನಿಗೆ ಭಕ್ತಿಭಾವದ ತಿರುಳನ್ನು ಅಲ್ಲಮನು ತೋರಿಸಿದನು.
ಆನಂತರ ‘‘ಗುರುವೆ ಕರುಣಿಸು, ಭಕ್ತಿಭಾವದ ಪುತ್ಥಳಿಯೇ ಕರುಣಿಸು, ಲಿಂಗನಿಷ್ಠೆಯ ಶ್ರೇಷ್ಠನೆ ಕರುಣಿಸು’ ಎಂದು ಅನಿಮಿಷನ ಮುಂದೆ ಅಲ್ಲಮನು ತನ್ನ ಲೀಲೆಯನ್ನು ನಟಿಸಿದನು. ಆಗ ಅನಿಮಿಷನ ಕೈಯಲ್ಲಿದ್ದ ಶಿವಲಿಂಗವು ಆ ಕ್ಷಣವೇ ಎದ್ದು ಮೆಲ್ಲನೆ ಬಂದು ಅಲ್ಲಮನನ್ನು ಸೇರಿತು. ನೋಟವೇ ಪ್ರಾಣಸ್ವರೂಪವಾದ ಕ್ರಿಯೆ. ಆದ ಕಾರಣ ಲಿಂಗದ ಕೂಟವಾದೊಡನೆ ಅನಿಮಿಷನ ಜೀವಕಳೆ ಬಂದು ಅಲ್ಲಮನ ದಿವ್ಯದೇಹದಲ್ಲಿ ತದ್ಗತಗೊಂಡಿತು. ಗೊಗ್ಗಯ್ಯನು ಇದೆಲ್ಲವನ್ನು ಕಣ್ಣಾರೆ ಕಂಡನು. ಸಂಪೂರ್ಣವಾಗಿ ಅಲ್ಲಮನಲ್ಲಿ ಬಂದು ನೆಲೆಸಿದ್ದನ್ನು ಗೊಗ್ಗಯ್ಯ ಕಂಡನು. ಅವನಿಗೆ ಅಚ್ಚರಿಯಾಯಿತು. ಇವನು ಸಾಮಾನ್ಯನಲ್ಲ. ದೈವೀಪುರುಷನೇ ಹೌದು. ಹಾಗಿಲ್ಲದೆ ಹೋಗಿದ್ದರೆ, ಅನಿಮಿಷನನ್ನು ಇವನು ಸ್ವೀಕರಿಸುವುದಾದರೂ ಹೇಗೆ? ಲಿಂಗವು ಹೇಗೆ ಕೂಡುತ್ತಿತ್ತು? ಎಂದು ಗೊಗ್ಗಯ್ಯ ಭಾವಿಸಿಕೊಂಡನು.
ಅಲ್ಲಮನು ಗೊಗ್ಗಯ್ಯನಿಗೆ ಲಿಂಗನಿಷ್ಠೆಯ ಪರಿಯನ್ನು ತೋರಿಸಬೇಕಾಗಿತ್ತು. ಅದು ಮಾತಿನಿಂದ ಉಪಮಿಸಲು ಸಾಧ್ಯವಿಲ್ಲ! ಅದು ಪ್ರತ್ಯಕ್ಷವಾಗಿಯೇ ಕಾಣಿಸಬೇಕು. ಇದು ಅಲ್ಲಮನು ಗುರು- ಲಿಂಗ- ಜಂಗಮ ನಿಷ್ಠೆಯನ್ನು ಅನಿಮಿಷನ ದೃಷ್ಟಾಂತದ ಮೂಲಕ ಗೊಗ್ಗಯ್ಯನಿಗೆ ತೋರಿಸಿದ ಪರಿ. ಆಗ ಗೊಗ್ಗಯ್ಯ, ಜಗದ ಜನರಿಗೆ ನೀನು ಲಿಂಗನಿಷ್ಠೆಯನ್ನು ತೋರಿಸುತ್ತಲೇ ಇರುವುದು ಅವಶ್ಯ. ಏಕೋದೃಷ್ಟಿ, ಏಕೋಭಾವ, ಇವುಗಳಿಗೆ ಅನಿಮಿಷನು ಉದಾಹರಣೆ! ಇದು ಲೋಕಕ್ಕೆ ಅಪ್ರತ್ಯಕ್ಷವಾದದ್ದು. ಸಾಧಕರು ಇದನ್ನು ಸರಿಯಾಗಿ ತಿಳಿಯಲಾರರು. ಆದುದರಿಂದ ನೀನು ಜಗದ ಶಿವಭಕ್ತರಿಗೆ, ಜಂಗಮರಿಗೆ ಲಿಂಗನಿಷ್ಠೆಯನ್ನು ಆಚರಣೆಯಲ್ಲಿ ತೋರಿಸಿ, ಅದನ್ನು ಧರಿಸಲು ಅನುಕೂಲ ಮಾಡಿಕೊಡಬೇಕೆಂದು ಅಲ್ಲಮನಲ್ಲಿ ನಿವೇದಿಸಿಕೊಂಡನು. ಇದರಿಂದ ಗೊಗ್ಗಯ್ಯನಿಗೆ ಗುರು-ಲಿಂಗ ನಿಷ್ಠೆ ತಿಳಿದಂತೆ ಆಯಿತು. ಜಗದ ಜನರು ‘ಶಿವಪಥವನ್ನು ತಿಳಿಯುವುದು ಅವಶ್ಯ. ಆದರೆ, ಸಾಮಾನ್ಯರಿಗೆ ಈ ದಾರಿಯಲ್ಲಿ ಹೋಗುವುದು ಕಷ್ಟ. ಆದುದರಿಂದ ಜಗದ ಗುರುವಾಗಿಯೇ ಹೋಗಬೇಕೆಂದು ಗೊಗ್ಗಯ್ಯ ಅಲ್ಲಮನಲ್ಲಿ ವಿನಂತಿಸಿಕೊಳ್ಳುತ್ತಾನೆ. ಇತ್ತ ಗೊಗ್ಗಯ್ಯನು ಅಲ್ಲಮನು ತೋರಿಸಿದ ಲಿಂಗನಿಷ್ಠೆಯ ಏಕೋಭಾವದಿಂದ ಚಂಚಲರಹಿತನಾದ. ಅನಿಮಿಷಯ್ಯನ ಭಾವದ ಬಳಕೆಯನ್ನು ಗೊಗ್ಗಯ್ಯ ಹೆಚ್ಚುಗೊಳಿಸಿಕೊಂಡು ತೋಟದ ಮನೆಯಲ್ಲಿ ಇರತೊಡಗಿದ. ಹೀಗೆ ಗೊಗ್ಗಯ್ಯನು, ಅಲ್ಲಮನ ಮೂಲಕ ಶಿವಪಥದ ದಾರಿಯನ್ನು ಕಂಡುಕೊಂಡು ಉದ್ಧಾರನಾದ. ಅಲ್ಲಮನು ನಡೆಯುವಾಗ ಹೀಗೆ ಸಿಕ್ಕಸಾಧಕರನ್ನು ಶಿವಪಥದ ದಾರಿಗೆ ಎಳೆತಂದು ಉದ್ಧಾರಗೊಳಿಸಿದ ರೀತಿ ಅನನ್ಯವಾದುದು.
(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)