ನ್ಯೂಸ್

Punjab Flood | ಪ್ರವಾಹಕ್ಕೆ ನಲುಗುತ್ತಿರುವ ಪಂಜಾಬ್​​ ; ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಆಪ್​​ನ ಎಲ್ಲ ಶಾಸಕರು, ಸಂಸದರ ತಿಂಗಳ ಸಂಬಳ ದೇಣಿಗೆ: ಕೇಜ್ರಿವಾಲ್

Punjab Flood: ಪಂಜಾಬ್‌ನಲ್ಲಿ ಭೀಕರ ಪ್ರವಾಹ ಉಂಟಾಗಿರುವ ಹಿನ್ನಲೆಯಲ್ಲಿ, ಆಮ್ ಆದ್ಮಿ ಪಕ್ಷದ (ಎಎಪಿ) ಎಲ್ಲ ಸಂಸದರು ಮತ್ತು ಶಾಸಕರು ತಮ್ಮ ಒಂದು ತಿಂಗಳ ಸಂಬಳವನ್ನು ಪಂಜಾಬ್ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವುದಾಗಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮಂಗಳವಾರ (ಸೆಪ್ಟೆಂಬರ್​ 2) ಘೋಷಿಸಿದ್ದಾರೆ.

ತಮ್ಮ ಎಕ್ಸ್​​ ಖಾತೆಯಲ್ಲಿ ಈ ಕುರಿತಾಗಿ ವಿಡಿಯೋ ಹಂಚಿಕೊಂಡಿರುವ ಕೇಜ್ರಿವಾಲ್​​​, ರಾಷ್ಟ್ರ ಎದುರಿಸುತ್ತಿರುವ ಎಲ್ಲ ಬಿಕ್ಕಟ್ಟಿನಲ್ಲೂ ಪಂಜಾಬ್ ಬೆಂಬಲವಾಗಿ ನಿಂತಿದ್ದು, ಇಂದು ಸ್ವತಃ ಪಂಜಾಬ್ ಸಂಕಷ್ಟದಲ್ಲಿರುವುದರಿಂದ, ಇಂತಹ ಪರಿಸ್ಥಿತಿಯಲ್ಲಿ ಪ್ರಹಾಹ ಪೀಡಿತ ಜನರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ ದೇಶದ ಜನರಲ್ಲಿ ಮನವಿ ಮಾಡುತ್ತೇನೆ. ನಮ್ಮ ಪಕ್ಷದ ಎಲ್ಲ ಸಂಸತ್ ಸದಸ್ಯರು ಮತ್ತು ಶಾಸಕರು ಪಂಜಾಬ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ತಿಂಗಳ ಸಂಬಳವನ್ನು ದೇಣಿಗೆ ನೀಡುತ್ತಿದ್ದಾರೆ. ನಾವೆಲ್ಲ ಒಟ್ಟಾಗಿ ಈ ಭೀಕರ ದುರಂತವನ್ನು ನಿವಾರಿಸಲು ಸಹಾಯ ಮಾಡೋಣ ಎಂದು ಹೇಳಿದ್ದಾರೆ.

ಈ ಬಿಕ್ಕಟ್ಟಿನ ಸಮಯದಲ್ಲಿ, ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಸರ್ಕಾರ ಮತ್ತು ಎಎಪಿ ಪಕ್ಷ ಕಾರ್ಯಕರ್ತರು ಜನರೊಂದಿಗೆ ಬಂಡೆಯಂತೆ ನಿಂತಿದೆ ಎಂದರು.

ಕಳೆದ ಒಂದು ತಿಂಗಳಲ್ಲಿ ಪಂಜಾಬ್ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಪ್ರವಾಹದಿಂದ ತತ್ತರಿಸಿದ್ದು, 29 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 1,044 ಗ್ರಾಮಗಳು ತೊಂದರೆಗೀಡಾಗಿವೆ. ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಎಚ್ಚರಿಸಿದ್ದಾರೆ. ರಾಜ್ಯಾದ್ಯಂತ ನಿರಂತರ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಮವಾರದಿಂದ ಎಲ್ಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳನ್ನು ಸೆಪ್ಟೆಂಬರ್ 3 ರವರೆಗೆ ಬಂದ್​​ ಮಾಡುವುದಾಗಿ ಘೋಷಿಸಿದೆ.

ಎನ್‌ಡಿಆರ್‌ಎಫ್, ಸೇನೆ, ಬಿಎಸ್‌ಎಫ್ ಮತ್ತು ಜಿಲ್ಲಾ ಅಧಿಕಾರಿಗಳು ಇದುವರೆಗೆ ಪ್ರವಾಹ ಪೀಡಿತ ಪ್ರದೇಶಗಳಿಂದ 14,936 ಜನರನ್ನು ರಕ್ಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್​​​)