Fake Case: ಇದು ಶರವೇಗದಲ್ಲಿ ಸಾಗುತ್ತಿರುವ ಡಿಜಿಟಲ್ ಯುಗ ಎಂಬುದನ್ನು ಬಹಳ ಸೂಕ್ಷ್ಮವಾಗಿ ಅರಿತಿರುವ ಆನ್ಲೈನ್ ವಂಚಕರು, ಜನರನ್ನು ಸುಲಭವಾಗಿ ತಮ್ಮ ಖೆಡ್ಡಾಗೆ ಬೀಳಿಸಿಕೊಳ್ಳುವುದರಲ್ಲಿ ನಿಸ್ಸೀಮರಾಗಿದ್ದಾರೆ. ಕೇವಲ ಒಂದೇ ಒಂದು ದೂರವಾಣಿ ಕರೆ, ಇಮೇಲ್ ಅಥವಾ ಸಂದೇಶದ ಮೂಲಕ ಅಮಾಯಕರ ಹಣವನ್ನು ಕ್ಷಣ ಮಾತ್ರದಲ್ಲಿ ಲಪಟಾಯಿಸುವ ಕೆಲಸವನ್ನು ಕರಗತ ಮಾಡಿಕೊಂಡಿದ್ದಾರೆ. ಸದ್ಯ ಇಂತಹ ಆನ್ಲೈನ್ ವಂಚನೆ ಪ್ರಕರಣಗಳನ್ನು ಡಿಜಿಟಲ್ ಅರೆಸ್ಟ್ ಎಂದು ಕರೆಯಲಾಗಿದ್ದು, ಇಲ್ಲೊಬ್ಬಳು ಯುವತಿ ಕೂಡ ಇದೇ ಜಾಲಕ್ಕೆ ಸಿಲುಕಿ ಬರೋಬ್ಬರಿ 9.93 ಲಕ್ಷ ರೂ. ಕಳೆದುಕೊಂಡಿದ್ದಾಳೆ.
ಮಹಾರಾಷ್ಟ್ರ ಮೂಲದ 24 ವರ್ಷ ವಯಸ್ಸಿನ ಗಗನಸಖಿ, ಆನ್ಲೈನ್ ವಂಚಕರ ನಕಲಿ ಪಾರ್ಸೆಲ್ ಕರೆಗೆ ಹೆದರಿ 10 ಲಕ್ಷ ರೂ. ವರ್ಗಾಯಿಸಿದ್ದಾಳೆ. ಮುಂಬೈನ ಥಾಣೆಯಲ್ಲಿ ನೆಲೆಸಿರುವ ಈಕೆ, ಕಳೆದ ವರ್ಷ ನವೆಂಬರ್ನಲ್ಲಿ ಅಪರಿಚಿತ ದೂರವಾಣಿ ಸಂಖ್ಯೆಯಿಂದ ಪದೇ ಪದೇ ಕರೆಗಳನ್ನು ಸ್ವೀಕರಿಸಿದ್ದಾರೆ. ಇದರಲ್ಲಿ ಯಾವುದೋ ಒಂದು ಸಂಖ್ಯೆಗೆ ಸ್ಪಂದಿಸಿದ ಯುವತಿಗೆ ದುಷ್ಕರ್ಮಿಗಳು, ನೀವು ಕಳಿಸಿದ ಪಾರ್ಸೆಲ್ ಇರಾನ್ ತಲುಪುವಲ್ಲಿ ವಿಫಲವಾಗಿದೆ. ನಿಮ್ಮ ಮೊಬೈಲ್ ಸಂಖ್ಯೆ ಇದಕ್ಕೆ ಲಿಂಕ್ ಆಗಿದೆ. ಅಕ್ರಮ ಹಣ ವರ್ಗಾವಣೆ ಕೇಸ್ನಲ್ಲಿ ನೀವು ಸಿಕ್ಕಿಬಿದ್ದಿದ್ದೀರಾ ಎಂದು ತಿಳಿಸಿದ್ದಾರೆ.
ತನಗೆ ಕರೆ ಮಾಡಿದವರಿಗೆ ತಾನು ಯಾವುದೇ ಪಾರ್ಸೆಲ್ ಕಳುಹಿಸಿಲ್ಲ ಎಂದು ಯುವತಿ ಎಷ್ಟೇ ಬಾರಿ ತಿಳಿ ಹೇಳಿದರೂ ಆಕೆಗೆ ವಿಡಿಯೋ ಕಾಲ್ ಮೂಲಕ ಬಂಧನದ ಭೀತಿ ಹುಟ್ಟಿಸಿದ್ದಾರೆ. ಇದರ ಬಳಿಕ ವಿಡಿಯೋ ಕಾಲ್ ಮಾಡಿದ ದುಷ್ಕರ್ಮಿಗಳು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿಮ್ಮ ಹೆಸರು ತಳುಕು ಹಾಕಿಕೊಂಡಿದೆ. ಶೀಘ್ರವೇ ಬಂಧನಕ್ಕೆ ಒಳಗಾಗುವಿರಿ ಎಂದು ಬೆದರಿಕೆ ಹಾಕಿದ್ದಾರೆ. ಇದಕ್ಕೆ ಹೆದರಿದ ಯುವತಿ, ಮುಂದೇನು ಮಾಡಬೇಕು ಎಂದು ತೋಚದೆ, ದುಷ್ಕರ್ಮಿಗಳು ಕಳಿಸಿದ ಲಿಂಕ್ಗೆ ಹಣ ವರ್ಗಾಯಿಸಿದ್ದಾರೆ.
ವಂಚಕರ ಮಾತಿಗೆ ಹೆದರಿ, ಪೊಲೀಸ್, ಕೋರ್ಟ್-ಕಚೇರಿ ಮೆಟ್ಟಿಲೇರುವುದು ಬೇಡ ಎಂದು ನಿರ್ಧರಿಸಿದ ಯುವತಿ, ಅವರು ಕಳಿಸಿದ ಲಿಂಕ್ಗೆ ತಕ್ಷಣವೇ 9.93 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದಾಳೆ. ಇದಾಗಿ ಕೆಲವು ಗಂಟೆಗಳ ಬಳಿಕ ತಾನು ಮೋಸದ ಜಾಲಕ್ಕೆ ಸಿಲುಕಿದೆ ಎಂಬುದನ್ನು ಅರಿತ ಗಗನಸಖಿ, ಕೂಡಲೇ ಸಹಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ. ಯುವತಿ ನೀಡಿದ ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತಾ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ,(ಏಜೆನ್ಸೀಸ್).