ನ್ಯೂಸ್

ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದಿಂದ ಹೊರಬಂದ ಎಐಎಡಿಎಂಕೆ!

ಚೆನ್ನೈ: ಬಿಜೆಪಿ ನೇತೃತ್ವದ ಎನ್​ಡಿಎ ಜತೆ ಕರ್ನಾಟಕದ ಜೆಡಿಎಸ್​ ಮೈತ್ರಿ ಮಾಡಿಕೊಂಡ ಬೆನ್ನಿಗೇ ಅತ್ತ ತಮಿಳುನಾಡಿನಲ್ಲಿ ಮೈತ್ರಿಯೊಂದು ಮುರಿದು ಬಿದ್ದಿರುವುದು ಖಚಿತಗೊಂಡಿದೆ. ಅರ್ಥಾತ್, ಎಐಎಡಿಎಂಕೆ ಪಕ್ಷವು ಎನ್​ಡಿಎ ಮೈತ್ರಿಕೂಟದಿಂದ ಹೊರಬಂದಿದೆ.

ಬಿಜೆಪಿಯು ಎನ್​ಡಿಎ ವಿರುದ್ಧ ಕಳೆದ ಒಂದು ವರ್ಷದಿಂದ ವಾಗ್ದಾಳಿ ನಡೆಸುತ್ತಿದ್ದು, ಎಐಎಡಿಎಂಕೆ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದುದೇ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದಿಂದ ಹೊರಬರಲು ಪ್ರಮುಖ ಕಾರಣ ಎಂದು ಪಕ್ಷವು ತಿಳಿಸಿದೆ.

ರಾಜ್ಯ ಬಿಜೆಪಿ ನಾಯಕರು ನಿರಂತರವಾಗಿ ನಮ್ಮ ನಾಯಕ, ಪಕ್ಷದ ಪ್ರಧಾನ ಕಾರ್ಯದರ್ಶಿ ಪಳನಿಸ್ವಾಮಿ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಇಂಥದ್ದೊಂದು ನಿರ್ಧಾರವನ್ನು ಅವಿರೋಧವಾಗಿ ಕೈಗೊಳ್ಳಲಾಗಿದೆ. ಪಕ್ಷದ 2 ಕೋಟಿ ಸ್ವಯಂಸೇವಕರ ಅಭಿಪ್ರಾಯ, ಆಶಯದಂತೆ ಮೈತ್ರಿಕೂಟದಿಂದ ಹೊರಬರಲಾಗಿದೆ ಎಂದು ಎಐಎಡಿಎಂಕೆ ಹೇಳಿದೆ.

ಮುಂದಿನ ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ಸಮಯ ಇರುವಾಗ ಇಂಥದ್ದೊಂದು ಬೆಳವಣಿಗೆ ನಡೆದಿರುವುದು ಚುನಾವಣಾ ಫಲಿತಾಂಶದ ಮೇಲೆ ನಿರ್ಣಾಯಕ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.