ನ್ಯೂಸ್

ಎಐ, ಡೀಪ್​ಫೇಕ್ಸ್​ ಮೂಲಕ ಹನಿಟ್ರ್ಯಾಪ್: ಪ್ರೇಮಿಗಳ ದಿನದಂದೇ ಪಾಕಿಸ್ತಾನ ಆ್ಯಕ್ಟೀವ್​,​ ಆಘಾತಕಾರಿ ವರದಿ ಬಹಿರಂಗ

ಮುಂಬೈ: ಭಾರತಕ್ಕೆ ಸಂಬಂಧಿಸಿದ ಗೌಪ್ಯ ಮಾಹಿತಿಗಳನ್ನು ಸಂಗ್ರಹಿಸಲು ಅತ್ಯಂತ ಕೀಳುಮಟ್ಟಕ್ಕೆ ಇಳಿದಿರುವ ಪಾಕಿಸ್ತಾನ, ಕೃತಕ ಬುದ್ಧಿಮತ್ತೆ ಹಾಗೂ ಡೀಪ್​ಫೇಕ್ಸ್ ಟೆಕ್ನಾಲಜಿ ದುರ್ಬಳಕೆ ಮಾಡಿಕೊಂಡು ಭಾರತದ ರಕ್ಷಣಾ ಸಿಬ್ಬಂದಿ, ಉನ್ನತ ಅಧಿಕಾರಿಗಳು ಮತ್ತು ಪೊಲೀಸ್​ ಅಧಿಕಾರಿಗಳನ್ನು ಹನಿಟ್ರ್ಯಾಪ್ ಬಲೆ ಬೀಳಿಸಲು ಹೊಂಚು ಹಾಕಿರುವುದನ್ನು​ ಭಾರತೀಯ ಗುಪ್ತಚರ ಸಂಸ್ಥೆಗಳು ಪತ್ತೆ ಮಾಡಿವೆ.

ಪಾಕಿಸ್ತಾನಿ ಇಂಟಿಲಿಜೆನ್ಸ್​ ಆಪರೇಟಿವ್ಸ್​ (ಪಿಐಒ) ಇಂಥದ್ದೊಂದು ದುಷ್ಕೃತ್ಯಕ್ಕೆ ಕೈಹಾಕಿದೆ. ರಕ್ಷಣಾ ಸಿಬ್ಬಂದಿ, ರಕ್ಷಣಾ ಇಲಾಖೆಯ ಗುತ್ತಿಗೆ ಆಧಾರಿತ ಕಾರ್ಮಿಕರು, ಸೈನಿಕರು, ಅಧಿಕಾರಿಗಳು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳನ್ನು ಮೋಹದ ಬಲೆಗೆ ಬೀಳಿಸಲು ಹನಿಟ್ರ್ಯಾಪ್ ಪ್ರೊಫೈಲ್‌ಗೆ ಅನುಗುಣವಾಗಿ ಕಾಲ್ಪನಿಕ ಪಾತ್ರಗಳನ್ನು ರಚಿಸಲಾಗುತ್ತಿದೆ. ಈಗಾಗಲೇ ಹಲವಾರು ಶಂಕಿತ ಅಧಿಕಾರಿಗಳು ಗುಪ್ತಚರ ಏಜೆನ್ಸಿಯ ಕಣ್ಗಾವಲಿನ ಅಡಿಯಲ್ಲಿದ್ದು, ತನಿಖೆ ನಡೆಯುತ್ತಿರುವುದಾಗಿ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ಪ್ರೇಮಿಗಳ ದಿನದಂದೇ ಪಾಕಿಸ್ತಾನಿ ಇಂಟಿಲಿಜೆನ್ಸ್​​ ಆಪರೇಟಿವ್ಸ್​ ತುಂಬಾ ಸಕ್ರಿಯವಾಗಿದ್ದು, ಶುಭಾಶಯ ಕೋರುವ ನೆಪದಲ್ಲಿ ದೋಷಪೂರಿತ ಲಿಂಕ್​ಗಳನ್ನು ಮೊಬೈಲ್​ಗೆ ಕಳುಹಿಸಿ, ಹ್ಯಾಕ್​ ಮಾಡಿ ಸೂಕ್ಷ್ಮ ಮಾಹಿತಿಗಳನ್ನು ಕದಿಯುವ ಪ್ರಯತ್ನ ನಡೆಯುತ್ತಿದೆ. ಸಂದೇಶಗಳಲ್ಲಿ ಬಣ್ಣ ಬಣ್ಣದ ಮಾತುಗಳನ್ನಾಡಿ ನಿಕಟ ಸಂಬಂಧ ಬೆಳೆಸುವ ಯತ್ನವೂ ನಡೆದಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ.

ಈವರೆಗಿನ ತನಿಖೆಯ ಪ್ರಕಾರ, ಹೆಚ್ಚಿನ ಶಂಕಿತ ಮಹಿಳಾ ಪ್ರೊಫೈಲ್‌ಗಳನ್ನು ಪಾಯಲ್, ಸೋನಿಯಾ, ಆರತಿ, ಮಮತಾ ಮತ್ತು ಸುನೀತಾ ಮುಂತಾದ ಹೆಸರುಗಳೊಂದಿಗೆ ಎಐ ಮೂಲಕ ಜನರೇಟ್​ ಮಾಡಲಾಗಿದೆ. ಈ ಎಲ್ಲ ಪ್ರೊಫೈಲ್‌ಗಳು ಮಾಡೆಲ್‌ಗಳು, ಸಿನಿಮಾ ಇಂಡಸ್ಟ್ರಿಯಲ್ಲಿ ಹೆಣಗಾಡುತ್ತಿರುವ ನಟಿಯರು, ವಿಚ್ಛೇದಿತರು ಅಥವಾ ಜೀವನದಲ್ಲಿ ಅನಿವಾರ್ಯತೆ ಎದುರಿಸುತ್ತಿರುವವರ ಸೋಗಿನಲ್ಲಿವೆ. ರಕ್ಷಣಾ ಸಿಬ್ಬಂದಿ, ಯೋಧರು, ಉನ್ನತ ಶ್ರೇಣಿಯ ಅಧಿಕಾರಿಗಳು ಅಥವಾ ಇನ್ನಿತರ ಅಧಿಕಾರಿಗಳು ಸಾಮಾಜಿಕ ಜಾಲತಾಣವನ್ನು ಬಳಸಿದಾಗಲೆಲ್ಲ ಈ ಕಾಲ್ಪನಿಕ ಪ್ರೊಫೈಲ್​ಗಳನ್ನು ನಿಯೋಜಿಸಿ, ಹನಿಟ್ರ್ಯಾಪ್​ ಪ್ರಯತ್ನ ಮಾಡಲಾಗುತ್ತದೆ.

ಲೈಂಗಿಕತೆ ಆಫರ್​

ಪಾಕ್​ ಏಜೆನ್ಸಿಯ ಕಾರ್ಯಾಚರಣೆಯು ಅಧಿಕಾರಿಗಳ ಸ್ಮಾರ್ಟ್‌ಫೋನ್‌ಗಳಿಂದ ಹೊರತೆಗೆಯಲಾದ ಡೇಟಾಬೇಸ್‌ಗಳನ್ನು ಆಧರಿಸಿರುತ್ತದೆ. ಮೊಬೈಲ್​ ಡೇಟಾವನ್ನು ವಿಶ್ಲೇಷಿಸುವ ಮೂಲಕ ಅಧಿಕಾರಿಯ ಗುಣಲಕ್ಷಣಗಳನ್ನು ವಿಶ್ಲೇಷಿಸಿ, ತಮ್ಮ ಮಿಕಾಗಳನ್ನು ಪಿಐಒ ಆಯ್ಕೆಮಾಡುತ್ತದೆ. ಈ ಪಿಐಒಗಳಿಗೆ ತಮ್ಮ ಗುರಿಗಳ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ಹೀಗಾಗಿ ಅವರನ್ನು ತಮ್ಮ ಬಲೆಗೆ ಬೀಳಿಸಲು ಮತ್ತು ಮೋಸಗೊಳಿಸಲು ಸುಲಭವಾಗುತ್ತದೆ. ಅಧಿಕಾರಿಗಳ ಜತೆಗಿನ ಸಂವಾದದ ಸಮಯದಲ್ಲಿ ಅವರಿಗೆ ಸೆಕ್ಸ್​ ಆಫರ್​ ನೀಡಲಾಗುತ್ತದೆ. ಬಳಿಕ ಅಧಿಕಾರಿಗಳ ಫೋನ್‌ಗಳಲ್ಲಿನ ಡೇಟಾವನ್ನು ಪ್ರತಿಯಾಗಿ ಪಡೆದುಕೊಳ್ಳುತ್ತಾರೆ.

ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಡೆಸಿದ ತನಿಖೆಯ ಪ್ರಕಾರ ಇತ್ತೀಚಿನ ಹನಿಟ್ರ್ಯಾಪ್ ಪ್ರಕರಣದಲ್ಲಿ ಪಿಐಒ ಮತ್ತು ನೇವಲ್​ ಡಕ್‌ಯಾರ್ಡ್‌ನಲ್ಲಿ ತರಬೇತಿ ಪಡೆದ ಸಿವಿಲ್ ಅಪ್ರೆಂಟಿಸ್ ಗೌರವ್ ಅರ್ಜುನ್ ಪಾಟೀಲ್ ನಡುವೆ 900 ಚಾಟ್‌ಗಳು ಪತ್ತೆಯಾಗಿವೆ. ಮೂಲಗಳ ಪ್ರಕಾರ ಪಾಯಲ್ ಏಂಜೆಲ್ ಮತ್ತು ಆರತಿ ಶರ್ಮಾ ಹೆಸರಿನ ಎಐ-ರಚಿಸಿದ ಪ್ರೊಫೈಲ್‌ಗಳನ್ನು ಗೌರವ್​ ಅರ್ಜುನ್​ ಜತೆಗಿನ ಸಂವಹನಕ್ಕಾಗಿ ಬಳಸಲಾಗಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)