Ahmedabad plane crash : ಏರ್ ಇಂಡಿಯಾ ವಿಮಾನ AI-171 ರಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಲ್ಲಿ ಒಬ್ಬರಾದ ರಮೇಶ್ ವಿಶ್ವಾಸ್‌ಕುಮಾರ್ ಭೀಕರ ಅಪಘಾತದಿಂದ ಪವಾಡಸದೃಶವಾಗಿ ಬದುಕುಳಿದಿದ್ದಾರೆ.
ವಿಮಾನ ಪತನದ ಸಮಯದಲ್ಲಿ ಸೀಟ್ ನಂಬರ್ 11A ನಲ್ಲಿ ಕುಳಿತಿದ್ದ 38 ವರ್ಷದ ರಮೇಶ್ ವಿಮಾನದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆಂದು ವರದಿಯಾಗಿದೆ. ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಒಬ್ಬ ಪ್ರಯಾಣಿಕ ಬದುಕುಳಿದಿದ್ದಾರೆ ಎಂದು ಅಹಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್. ಮಲಿಕ್ ಕೂಡ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಪೊಲೀಸರು 11A ಸೀಟಿನಲ್ಲಿ ಬದುಕುಳಿದ ಒಬ್ಬ ವ್ಯಕ್ತಿಯನ್ನು ಪತ್ತೆಹಚ್ಚಿದ್ದಾರೆ. ಬದುಕುಳಿದ ವ್ಯಕ್ತಿ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಸಾವಿನ ಸಂಖ್ಯೆಯ ಬಗ್ಗೆ ಇನ್ನೂ ಏನನ್ನೂ ಹೇಳಲು ಸಾಧ್ಯವಿಲ್ಲ. ವಿಮಾನವು ವಸತಿ ಪ್ರದೇಶದಲ್ಲಿ ಅಪಘಾತಕ್ಕೀಡಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಮಲಿಕ್ ಹೇಳಿದರು.
ಬದುಕುಳಿದ ರಮೇಶ್, ಸಣ್ಣಪುಟ್ಟ ಗಾಯಗಳೊಂದಿಗೆ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇದೇ ಸಂದರ್ಭದಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳು ಶೋಕ ಸಾಗರದಲ್ಲಿ ಮುಳುಗಿವೆ. ಶವಗಳನ್ನು ಗುರುತಿಸಲು ಡಿಎನ್ಎ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಲಂಡನ್ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು, ರಾಡಾರ್ ದತ್ತಾಂಶದ ಪ್ರಕಾರ ವಿಮಾನವು ವಿಪತ್ತು ಸಂಭವಿಸುವ ಮೊದಲು ಕೇವಲ 625 ಅಡಿ ಎತ್ತರಕ್ಕೆ ಏರಿತ್ತು. ವಿಮಾನವು ಬಿ ಜೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. 230 ಪ್ರಯಾಣಿಕರು ಮತ್ತು 12 ಸಿಬ್ಬಂದಿಯನ್ನು ಹೊತ್ತ ವಿಮಾನವು ಮಧ್ಯಾಹ್ನ 1.39 ಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತು. ಇದಾದ ಒಂದು ನಿಮಿಷದಲ್ಲೇ ಏರ್ ಟ್ರಾಫಿಕ್ ಕಂಟ್ರೋಲರ್ ಸಂಪರ್ಕವನ್ನು ಕಳೆದುಕೊಂಡಿತು. (ಏಜೆನ್ಸೀಸ್)