ಅಲಪ್ಪುಳ: ನಕಲಿ ನೋಟು ಪ್ರಕರಣದಲ್ಲಿ ಬಂಧನವಾಗಿ ಅಮಾನತಾಗಿರುವ ಕೇರಳದ ಮಹಿಳಾ ಕೃಷಿ ಅಧಿಕಾರಿಯ ಅವ್ಯವಹಾರ ಬಗೆದಷ್ಟು ಬಯಲಾಗುತ್ತಿದೆ. ನಕಲಿ ನೋಟಿನ ಬಹುದೊಡ್ಡ ಜಾಲದಲ್ಲಿ ಅಧಿಕಾರಿ ಶಾಮೀಲಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ ಎಂದು ತನಿಖಾ ತಂಡ ತಿಳಿಸಿದೆ.
ಎಂ. ಜಿಶ್ಮೋಲ್ ಬಂಧಿತ ಕೃಷಿ ಅಧಿಕಾರಿ. ಇವರು ಅಲಪ್ಪುಳದ ಎಡತುವಾದಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಕಲಿ ನೋಟು ಪ್ರಕರಣದಲ್ಲಿ ಮಾ.08ರಂದು ಬಂಧಿಸಲಾಗಿದೆ. ಇದರ ಬೆನ್ನಲ್ಲೇ ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರರಿಗಾಗಿ ಶೋಧ ಕಾರ್ಯಾಚಣೆ ನಡೆಸಲಾಗುತ್ತಿದೆ.
ಜಿಶ್ಮೋಲ್ ಅವರಿಂದ ಪಡೆದ ನೋಟನ್ನು ವ್ಯಕ್ತಿಯೊಬ್ಬ ಬ್ಯಾಂಕ್ಗೆ ನೀಡಿದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಜಿಶ್ಮೋಲ್ ಅವರಿಗೆ ಪರಿಚಿತನಾಗಿರುವ ಮೀನುಗಾರಿಕಾ ಸಾಧನಗಳನ್ನು ಮಾರಾಟ ಮಾಡುವ ವ್ಯಕ್ತಿಯೊಬ್ಬ 500 ರೂ. ಮುಖಬೆಲೆಯ 7 ನಕಲಿ ನೋಟುಗಳನ್ನು ಬ್ಯಾಂಕ್ಗೆ ತಂದಿದ್ದ. ಈ ವೇಳೆ ಸಿಕ್ಕಿಬಿದ್ದಾಗ ಜಿಶ್ಮೋಲ್ ಅವರು ನೋಟುಗಳನ್ನು ಕೊಟ್ಟಿದ್ದಾಗಿ ಹೇಳಿದ್ದ. ಬಳಿಕ ಜಿಶ್ಮೋಲ್ ಅವರನ್ನು ಕೇರಳ ಪೊಲೀಸರು ವಿಚಾರಣೆ ನಡೆಸಿದರು.
ಆದರೆ, ಸಾಕಷ್ಟು ಸಮಯದವರೆಗೆ ವಿಚಾರಣೆ ನಡೆಸಿದರೂ ಜಿಶ್ಮೋಲ್ ಮಾತ್ರ ನಕಲಿ ನೋಟಿನ ಮೂಲ ಯಾವುದು ಎಂದು ಬಹಿರಂಗಪಡಿಸಲಿಲ್ಲ. ಹೀಗಾಗಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಮನೆಯ ಮೇಲೂ ಪೊಲೀಸರು ದಾಳಿ ನಡೆಸಿದ್ದು, ಅನುಮಾನ ಬರುವಂತಹ ಯಾವುದೇ ವಸ್ತು ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ಬೇರೆ ಯಾರೋ ಜಿಶ್ಮೋಲ್ ಅವರಿಗೆ ನಕಲಿ ನೋಟುಗಳನ್ನು ನೀಡಿ ಬಲೆಗೆ ಬೀಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಜಿಶ್ಮೋಲ್ ಅವರೇ ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಬಗ್ಗೆ ತನಿಖಾ ತಂಡಕ್ಕೆ ಮಾಹಿತಿ ಲಭ್ಯವಾಗಿದೆ. ಕೈತುಂಬ ಸಂಬಳವಿದ್ರೂ ಅಕ್ರಮದಲ್ಲಿ ಭಾಗಿಯಾಗಿದ್ದ ಅಧಿಕಾರಿಯ ಮುಖವಾಡ ಇದೀಗ ಕಳಚಿಬಿದ್ದಿದೆ.
ಜಿಶ್ಮೋಲ್ ಅವರು ಅಲಪ್ಪುಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅವರು ಮಾಡೆಲಿಂಗ್ನಲ್ಲೂ ಸಕ್ರಿಯರಾಗಿದ್ದು, ಅನೇಕ ಫ್ಯಾಶನ್ ಶೋಗಳನ್ನು ಭಾಗವಹಿಸಿದ್ದಾರೆ. ಕೃಷಿ ವಿಭಾಗದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಜಿಶ್ಮೋಲ್ ಈ ಹಿಂದೆ ಗಗನಸಖಿಯಾಗಿ ಸೇವೆ ಸಲ್ಲಿಸಿದ್ದಾರೆ. 2009ರಲ್ಲಿ ಸ್ಪೈಸಸ್ ಬೋರ್ಡ್ನ ಫೀಲ್ಡ್ ಆಫೀಸರ್ ಆಗಿದ್ದರು. ಇದಾದ ನಂತರ ಅವರು ಮುವಾಟ್ಟುಪುಳದಲ್ಲಿ VHSE ಬೋಧಕರಾದರು. 2013ರಲ್ಲಿ ಕೃಷಿ ಅಧಿಕಾರಿಯಾಗಿ ಸೇವೆಗೆ ಸೇರಿದರು. (ಏಜೆನ್ಸೀಸ್)