ನ್ಯೂಸ್

ಅಂದು ಬಿಎಸ್​ವೈ, ಇಂದು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ; ರಾಜ್ಯಪಾಲರು ​ಹೇಳಿದ್ದೇನು ಗೊತ್ತಾ?

ಬೆಂಗಳೂರು: ಮುಡಾ ಬದಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದು, ರಾಜ್ಯ ಸರ್ಕಾರ ಮತ್ತು ರಾಜಭವನದ ಮಧ್ಯೆ ಸಂಘರ್ಷ ಏರ್ಪಟ್ಟಿದೆ. ರಾಜ್ಯಪಾಲರ ಈ ನಿರ್ಧಾರ ಸಿಎಂಗೆ ಮುಳುವಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದ್ದು, ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಈ ಪ್ರಕರಣ ಮುಂದೆ ಯಾವ ರೀತಿಯ ತಿರುವು ಪಡೆದುಕೊಳ್ಳಬಹುದು ಎಂಬ ವಿಚಾರ ತೀವ್ರ ಕುತೂಹಲ ಮೂಡಿಸಿದ್ದು, ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪನವರಿಗೆ ಎದುರಾದ ಪರಿಸ್ಥಿತಿ ಸಿದ್ದರಾಮಯ್ಯಗೆ ಬರುತ್ತದಾ ಎಂಬ ಪ್ರಶ್ನೆ ಮೂಡಲು ಶುರುವಾಗಿದೆ.

ಈ ಹಿಂದೆ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ಡಿನೋಟಿಫಿಕೇಷನ್ ಮಾಡಿದ್ಧಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದಲ್ಲದೆ ಗಣಿಗಾರಿಕೆಗೆ ಸಂಬಂಧಿಸಿದಂತೆ ವ್ಯಾಪಕ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ವಕೀಲ ಸಿರಾಜಿನ್ ಬಾಷಾ (ಡಿನೋಟಿಫಿಕೇಷನ್​), ಅಂದಿನ ಲೋಕಾಯುಕ್ತ ಸಂತೋಷ್​ ಹೆಗ್ಡೆ (ಗಣೀಗಾರಿಕೆ) ಸಲ್ಲಿಸಿದ್ದ ವರದಿ ಆಧರಿಸಿ ಅಂದಿನ ರಾಜ್ಯಪಾಲರಾಗಿದ್ದ ಹನ್ಸ್​ರಾಜ್​ ಭಾರಧ್ವಾಜ್​ಗೆ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದರು.

ಈ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ರಾಜ್ಯಪಾಲರಾಗಿದ್ದ ಹನ್ಸ್​ರಾಜ್​ ಭಾರಧ್ವಾಜ್​ ಅವರು ಮಾನ್ಯ ಲೋಕಾಯುಕ್ತರ ವರದಿಯನ್ನು ಸಂಬಂಧಿತ ಅನುಬಂಧಗಳೊಂದಿಗೆ ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ, ಕರ್ನಾಟಕ ಲೋಕಾಯುಕ್ತ ಕಾಯ್ದೆ, 1994 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ, 1988ರ ನಿಬಂಧನೆಗಳನ್ನು ಉಲ್ಲೇಖಿಸಿ, ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ತನಿಖೆಗೆ ಆದೇಶಿಸಿದ್ದರು.

ಲೋಕಾಯುಕ್ತ ಪೊಲೀಸರು ತನಿಖೆ ನಡೆಸಬೇಕಿರುವ ಕಾರಣ, ಈ ಹಂತದಲ್ಲಿ ಯಡಿಯೂರಪ್ಪ ಅವರನ್ನು ವಿಚಾರಣೆಗೆ ಒಳಪಡಿಸಲು ವಿಶೇಷ ಅನುಮತಿಯ ಅಗತ್ಯವಿಲ್ಲ. ಲೋಕಾಯುಕ್ತರು ತನಿಖಾ ವರದಿಯ ಪ್ರತಿಯನ್ನು ನನಗೆ ಸಲ್ಲಿಸಿದ್ದಾರೆ ಮತ್ತು ನಾನು ಅದನ್ನು ಸಕ್ಷಮ ಅಧಿಕಾರಿಯಾಗಿ ಸ್ವೀಕರಿಸಿದ್ದೇನೆ ಎಂದು ಹನ್ಸ್​ರಾಜ್​ ಭಾರಧ್ವಾಜ್ ಹೇಳಿದ್ದರು. ಆ ಬಳಿಕ ನಡೆದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್​. ಯಡಿಯೂರಪ್ಪನವರು ರಾಜೀನಾಮೆ ನೀಡಿದ್ದರು.

ಅಂದು ಕೇಂದ್ರದಲ್ಲಿ ಕಾಂಗ್ರೆಸ್​ ನೇತೃತ್ವದ ಯುಪಿಎ ಸರ್ಕಾರ ಆಡಳಿತ ನಡೆಸುತ್ತಿತ್ತು. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಈ ವಿಚಾರ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವಿನ ವಾಕ್ಸಮರಕ್ಕೆ ಕಾರಣವಾಗಿತ್ತು. ರಾಜ್ಯಪಾಲರು ಕಾಂಗ್ರೆಸ್ ಮತ್ತು ಜೆಡಿಎಸ್ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ. ಇದು ಹಾಡಹಗಲೇ ನಡೆದ ಪ್ರಜಾಪ್ರಭುತ್ವ ಮತ್ತು ನ್ಯಾಯದ ಕೊಲೆ ಎಂದು ಬಿಎಸ್​ವೈ ಕಿಡಿಕಾರಿದ್ದರು.

ಬೆಂಬಲಿಸಿದ್ದ ಕಾಂಗ್ರೆಸ್​

ಕರ್ನಾಟಕವು ದೇಶದ ಇತರೆ ಭಾಗಗಳಿಗೆ ಮಾದರಿ ಹಾಗೂ ಪ್ರಗತಿಪರ ರಾಜ್ಯವಾಗಿತ್ತು. ಆದರೆ ಬಿಜೆಪಿ ಸರ್ಕಾರವು ರಾಜ್ಯದ ವರ್ಚಸ್ಸನ್ನು ಕೆಡಿಸಿದೆ. ತಾವೇ ಹೆಣೆದ ಬಲೆಗೆ ಯಡಿಯೂರಪ್ಪ ತಾವೇ ಸಿಲುಕಿದ್ದಾರೆ. ತನ್ನ ಉಳಿದ ಅವಧಿಯಲ್ಲಾದರೂ ಬಿಜೆಪಿ ಆಡಳಿತದ ಬಗ್ಗೆ ಗಮನ ಹರಿಸಲಿ. ರಾಜ್ಯಪಾಲರು ಸಾಂವಿಧಾನಿಕ ಅಧಿಕಾರಿ. ಸಂವಿಧಾನದ ಅಡಿಯಲ್ಲಿ ಅವರು ಅಂತಹ ವಿಷಯಗಳನ್ನು ನಿರ್ಧರಿಸುವ ವಿವೇಚನಾಧಿಕಾರ ಹೊಂದಿದ್ದಾರೆ. ಅವರು ಕಳೆದ ತಿಂಗಳಿನಿಂದ ಆ ವಿವೇಚನಾಧಿಕಾರವನ್ನು ಬಳಸುತ್ತಿದ್ದಾರೆ. ಇದರಿಂದ ಸಮಸ್ಯೆಯಾಗಿದ್ದಲ್ಲಿ ಯಾರಾದರೂ ಕಾನೂನು ಪರಿಹಾರ ಕಂಡುಕೊಳ್ಳಬಹುದು ಎಂದು ಕಾಂಗ್ರೆಸ್​ ನಾಯಕರು ಹೇಳಿದ್ದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಇದು ಕಾಂಗ್ರೆಸ್ ನಾಯಕತ್ವದಿಂದ ಬಂದಿರುವುದಲ್ಲ. ನಾನು ರಾಜ್ಯಪಾಲನಾಗಿ ತೆಗೆದುಕೊಂಡಿದ್ದ ನಿರ್ಧಾರಗಳ ಕಾರಣದಿಂದ ಎಂದು ಮಾಜಿ ರಾಜ್ಯಪಾಲರಾದ ಹನ್ಸ್​ರಾಜ್​ ಭಾರಧ್ವಾಜ್​ ಅವರು ಈ ಹಿಂದೆ ಕಾರ್ಯಕ್ರಮ ಒಂದರಲ್ಲಿ ಹೇಳಿದ್ದರು. ಈ ವಿಚಾರ ರಾಜಕೀಯ ಗದ್ದಲಕ್ಕೆ ಕಾರಣವಾಗಿತ್ತು.