ನ್ಯೂಸ್

12 ವರ್ಷಗಳ ಬಳಿಕ ಎ.ಆರ್. ಮುರುಗದಾಸ್ ಪ್ರಾಜೆಕ್ಟ್‌ಗೆ ಮರಳಲಿದ್ದಾರೆ ಈ ನಟ?

ಮುಂಬೈ: ಇತ್ತೀಚೆಗಷ್ಟೇ ನಿರ್ದೇಶಕ ಎ.ಆರ್. ಮುರುಗದಾಸ್ ಬಾಲಿವುಡ್​ ನಟ ಸಲ್ಮಾನ್ ಖಾನ್ ಅವರ ಜತೆಗಿನ ತಮ್ಮ ಮುಂಬರುವ ಬಾಲಿವುಡ್ ಸಿನಿಮಾವನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಈ ಹೊಸ ಪ್ರಾಜೆಕ್ಟ್​ ಪ್ರಾರಂಭಿಸುವ ಮುನ್ನ ನಟ ಶಿವಕಾರ್ತಿಕೇಯನ್ ಅವರೊಂದಿಗಿನ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸುವುದು ಬಾಕಿ ಉಳಿದಿದೆ.

ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಬಾಲಿವುಡ್​ ನಟ ವಿದ್ಯುತ್ ಜಮ್ವಾಲ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿನ ಸಿನಿ ವರದಿಯೊಂದು ಈ ಮಾಹಿತಿ ಹಂಚಿಕೊಂಡಿದ್ದು, ಇದೇ ವಿಷಯ ಸಾಮಾಜಿಕ ಜಾಲತಾಣದಲ್ಲಿ ಕೂಡ ಹರಿದಾಡುತ್ತಿದೆ. ನಿರೀಕ್ಷಿಸಿದಂತೆ ಈ ಸುದ್ದಿ ನಿಜವಾದರೆ, 2012ರಲ್ಲಿ ರಿಲೀಸ್ ಆದ ಸೂಪರ್​ಹಿಟ್​ 'ತುಪ್ಪಾಕ್ಕಿ' ಸಿನಿಮಾದ ನಂತರ ಮುರುಗದಾಸ್ ಮತ್ತು ಜಮ್ವಾಲ್ ಕಾಂಬಿನೇಷನ್​ ಮತ್ತೊಮ್ಮೆ ಈ ಚಿತ್ರದ ಮೂಲಕ ತೆರೆ ಮೇಲೆ ಮೋಡಿ ಮಾಡಲಿದೆ.

ಸದ್ಯ ಈ ವಿಷಯ ಕೇವಲ ವದಂತಿಯಾಗಿದ್ದು, ಜಮ್ವಾಲ್ ಎಂಟ್ರಿ ಬಗ್ಗೆ ಚಿತ್ರತಂಡ ಪ್ರಕಟಿಸುವ ಅಧಿಕೃತ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ. ಶ್ರೀ ಲಕ್ಷ್ಮಿ ಮೂವೀಸ್‌ನ ಎನ್‌.ವಿ. ಪ್ರಸಾದ್ ನಿರ್ಮಾಣದ ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಖ್ಯಾತ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರ ಸಂಗೀತವಿರಲಿದೆ,(ಏಜೆನ್ಸೀಸ್).