ಕಾಬುಲ್: ಚೆನ್ನೈನ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ಸೋಮವಾರ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಪಾಕಿಸ್ತಾನವನ್ನು ಮಣಿಸುವ ಮೂಲಕ ಐತಿಹಾಸಿಕ ಜಯಭೇರಿ ಬಾರಿಸಿದೆ.
ಇತ್ತ ಪಾಕಿಸ್ತಾನದ ವಿರುದ್ಧ ಅಫ್ಘಾನಿಸ್ತಾನ ಮೊದಲ ಜಯ ಸಾಧಿಸುತ್ತಿದ್ದಂತೆ ಅತ್ತ ರಾಜಧಾನಿ ಕಾಬುಲ್ನಲ್ಲಿ ಸಂಭ್ರಮಾಚರಣೆಗಳು ಮುಗಿಲು ಮುಟ್ಟಿತ್ತು. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಾಕಿಸ್ತಾನ ವಿರುದ್ಧ 8 ವಿಕೆಟ್ಗಳ ಜಯ ಸಾಧಿಸುವ ಮೂಲಕ ಅಫ್ಘಾನಿಸ್ತಾನದ ಬೀದಿಗಳಲ್ಲಿ ಮಕ್ಕಳು, ಹಿರಿಯರು ಸೇರಿದಂತೆ ಅನೇಕರು ಪಟಾಕಿ ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ. ರಾಷ್ಟ್ರೀಯ ತಂಡವು ಏಕದಿನ ವಿಶ್ವಕಪ್ ಗೆದ್ದಂತೆ ಅಫ್ಘಾನಿಸ್ತಾನದ ಜನರು ಸಂಭ್ರಮಿಸಿದ್ದಾರೆ. ಹಾಲಿ ಚಾಂಪಿಯನ್ ಇಂಗ್ಲಂಡ್ ವಿರುದ್ಧ ವಿಶ್ವಕಪ್ನಲ್ಲಿ ಗೆಲುವಿನ ನಂತರ ಪಾಕಿಸ್ತಾನದ ವಿರುದ್ಧ ಅಫ್ಘಾನಿಸ್ತಾನ ಬಾರಿ ಅಂತರದಲ್ಲಿ ಜಯಿಸಿದೆ. ರಾಜಧಾನಿ ಕಾಬೂಲ್ ಮತ್ತು ಯುದ್ಧ ಪೀಡಿತ ದೇಶದ ಇತರ ಭಾಗಗಳಲ್ಲಿ ಅಭೂತಪೂರ್ವ ದೃಶ್ಯಗಳು ಕಂಡುಬಂದವು.
ಸೋಮವಾರ ಚೆನ್ನೈನ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು 8 ವಿಕೆಟ್ಗಳ ಭರ್ಜರಿ ಜಯಗಳಿಸಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಅಯಕ ಬಾಬರ್ ಅಜಂ (74 ರನ್, 92 ಎಸೆತ, 4 ಬೌಂಡರಿ, 1 ಸಿಕ್ಸರ್), ಅಬ್ದುಲ್ಲ ಶಫಿಕ್ (58 ರನ್, 75 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಫಲವಾಗಿ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 282ರನ್ ಗಳಿಸಿತ್ತು.
283ರನ್ಗಳ ಗುರಿ ಬೆನ್ನತ್ತಿದ್ದ ಅಫ್ಘಾನಿಸ್ತಾನ ತಂಡವು ಆರಂಭಿಕರಾದ ಇಬ್ರಾಹಿಂ ಜರ್ದಾನ್ (85 ರನ್, 113 ಎಸೆತ, 10 ಬೌಂಡರಿ), ರೆಹಮಾನುಲ್ಲಾ ಗುರ್ಬಾಜ್ (65 ರನ್, 53 ಎಸೆತ, 9 ಬೌಂಡರಿ, 1 ಸಿಕ್ಸರ್), ರಹಮತ್ ಷಾ (77 ರನ್, 84 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಫಲವಾಗಿ 49 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿಯನ್ನು ತಲುಪಿ ಗೆಲುವಿನ ನಗೆ ಬೀರಿತ್ತು.