ನ್ಯೂಸ್

ಆದಿತ್ಯ-ಎಲ್​1 ಮಿಷನ್ ಭಾಗವಾಗಿರುವ ಈ ವಿಜ್ಞಾನಿಗಳು ಅತ್ಯಂತ ಸ್ವಚ್ಛವಾಗಿರಬೇಕಿತ್ತು, ಸೆಂಟ್ ಹಾಕುವಂತಿರಲಿಲ್ಲ!

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ಯಶಸ್ಸಿನ ಬಳಿಕ ನಿನ್ನೆಯಷ್ಟೇ ಸೌರಯಾನ ಕೈಗೊಂಡಿದ್ದು, ಆ ನಿಟ್ಟಿನಲ್ಲಿ ಆದಿತ್ಯ-ಎಲ್​​1 ಉಡಾವಣೆ ಕೂಡ ಮಾಡಲಾಗಿದೆ. ಈ ಆದಿತ್ಯ-ಎಲ್​1 ಕುರಿತು ಒಂದಷ್ಟು ಆಸಕ್ತಿಕರ ಅಂಶ ಬಹಿರಂಗಗೊಂಡಿದೆ.

ಆದಿತ್ಯ-ಎಲ್​1 ಮಿಷನ್​ನ ಭಾಗವಾಗಿರುವ ಒಂದಷ್ಟು ವಿಜ್ಞಾನಿಗಳು ಸ್ವಚ್ಛತೆಗೆ ಅತ್ಯಧಿಕ ಆದ್ಯತೆ ಕೊಡಬೇಕಾಗಿದ್ದಲ್ಲದೆ, ಅವರು ಸೆಂಟ್​ ಧರಿಸುವಂತೆ ಇರಲಿಲ್ಲ. ಆದಿತ್ಯ-ಎಲ್​1ನ ಮುಖ್ಯ ಪೇಲೋಡ್​ ವಿಸಿಬಲ್ ಎಮಿಷನ್ ಲೈನ್​ ಕೊರೊನಾಗ್ರಾಫ್​ (ವಿಇಎಲ್​ಸಿ)ಗೆ ಕೆಲಸ ಮಾಡಿದ್ದ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್ ಆ್ಯಸ್ಟ್ರೋಫಿಸಿಕ್ಸ್​ (ಐಐಎ) ವಿಜ್ಞಾನಿಗಳು ಇಂಥ ಕಠಿಣ ನಿಯಮಗಳನ್ನು ಅನುಸರಿಸಬೇಕಾಗಿದ್ದುದು ಬೆಳಕಿಗೆ ಬಂದಿದೆ.

ಈ ತಂಡದಲ್ಲಿನ ವಿಜ್ಞಾನಿಗಳು ಅತ್ಯಂತ ಸ್ವಚ್ಛವಾದ ಕೊಠಡಿಯಲ್ಲಿ 6 ಗಂಟೆಗಳ ಶಿಫ್ಟ್​ನಲ್ಲಿ ಕೆಲಸ ಮಾಡಿದ್ದರು. ಇವರು ಸೆಂಟ್​ ಸೇರಿದಂತೆ ಯಾವುದೇ ಸ್ಪ್ರೇ ಬಳಸುವಂತಿರಲಿಲ್ಲ. ಇಡೀ ದೇಹ ಮುಚ್ಚುವಂಥ ತೊಡುಗೆ ತೊಡಬೇಕಾಗಿತ್ತು. ಎಚ್​ಇಪಿಎ ಫಿಲ್ಟರ್, 99% ಕಾನ್ಸಂಟ್ರೇಟೆಡ್ ಐಸೊಪ್ರೊಫೈಲ್ ಆಲ್ಕೋಹಾಲ್ ಬಳಸಬೇಕಾಗಿತ್ತು. ಅಲ್ಲದೆ ಇವರು ಕೆಲಸ ಮಾಡುವ ಕೊಠಡಿ ಆಸ್ಪತ್ರೆಯ ಐಸಿಯುಗಿಂತಲೂ ಒಂದು ಲಕ್ಷ ಪಟ್ಟು ಹೆಚ್ಚು ಸ್ವಚ್ಛವಾಗಿರುತ್ತಿತ್ತು. ಕಲ್ಮಶದ ಒಂದೇ ಒಂದು ಸೂಕ್ಷ್ಮ ಕಣ ಕೂಡ ಇಡೀ ಶ್ರಮವನ್ನು ಹಾಳು ಮಾಡುವ ಸಾಧ್ಯತೆ ಇರುವುದರಿಂದ ಇದು ಅಗತ್ಯವಿತ್ತು ಎಂದು ಈ ತಂಡದ ವಿಜ್ಞಾನಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದರು.