ನ್ಯೂಸ್

ಭೂಮಿಯ ಪ್ರಭಾವವಲಯ ದಾಟಿ ಸೂರ್ಯನತ್ತ ಸಾಗಿದ ಆದಿತ್ಯ ನೌಕೆ: ಇದುವರೆಗೂ ಎಷ್ಟು ಕಿ.ಮೀ ಪ್ರಯಾಣಿಸಿದೆ?

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಸೂರ್ಯ ಯೋಜನೆಯ ಆದಿತ್ಯ- ಎಲ್​1 ನೌಕೆಯು ಭೂಮಿಯಿಂದ 9.2 ಲಕ್ಷ ಕಿಲೋ ಮೀಟರ್​ಗಳಾಚೆಗೆ ಪ್ರಯಾಣ ಮಾಡಿದ್ದು, ಭೂಮಿಯ ಪ್ರಭಾವವಲಯವನ್ನು ದಾಟಿ ಸೂರ್ಯನತ್ತ ಸಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಮಾಹಿತಿ ನೀಡಿದೆ.

ಆದಿತ್ಯ ಎಲ್​1 ನೌಕೆಯು ಸದ್ಯ ಸೂರ್ಯ ಮತ್ತು ಭೂಮಿಯ ನಡುವಿನ ಲಾಂಗ್ರಿಗಿಯನ್​ ಕೇಂದ್ರ 1 (ಎಲ್​1)ರ ಕಡೆ ಹೊರಟಿದೆ. ಈ ಕೇಂದ್ರವು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ ದೂರವಿದೆ. ಇಸ್ರೋ ಎರಡನೇ ಬಾರಿಗೆ ಭೂಮಿಯ ಪ್ರಭಾವವಲಯದಿಂದ ನೌಕೆಯನ್ನು ಹೊರಗೆ ಕಳುಹಿಸಿದೆ. ಇದರಲ್ಲಿ ಮಾರ್ಸ್ ಆರ್ಬಿಟರ್ ಮಿಷನ್ ಮೊದಲನೆಯದಾಗಿದೆ.

ಆದಿತ್ಯ-ಎಲ್​1 ಮಿಷನ್​ ಅನ್ನು 2023ರ ಸೆ. 2ರಂದು ಪಿಎಸ್​ಎಲ್​ವಿ-ಸಿ57 ರಾಕೆಟ್​ನಲ್ಲಿಟ್ಟು ಉಡಾವಣೆ ಮಾಡಲಾಯಿತು. ಇದು ಭಾರತದ ಮೊದಲ ಸಮರ್ಪಿತ ಸೌರ ವೀಕ್ಷಣಾಲಯ ವರ್ಗದ ಮಿಷನ್ ಆಗಿದೆ. ಸೂರ್ಯನ ವಿವಿಧ ಅಂಶಗಳನ್ನು ಅಧ್ಯಯನ ಮಾಡಲು ವಿನ್ಯಾಸಗೊಳಿಸಿರುವ ಏಳು ವಿವಿಧ ಪೇಲೋಡ್​ಗಳನ್ನು ನೌಕೆ ಹೊತ್ತೊಯ್ದಿದೆ.

ಏಳು ಪೇಲೋಡ್​ಗಳಲ್ಲಿ ನಾಲ್ಕು ಸೂರ್ಯನ ಬೆಳಕನ್ನು ಪರಿವೀಕ್ಷಣೆ ಮಾಡಲಿವೆ. ಉಳಿದ ಮೂರು ಪೇಲೋಡ್​ಗಳು ಸೂರ್ಯನ ಕಾಂತೀಯ ಕ್ಷೇತ್ರಗಳು ಮತ್ತು ಪ್ಲಾಸ್ಮಾದ ಇನ್​ ಸಿತ ಪ್ಯಾರಾಮೀಟರ್​ಗಳನ್ನು ಅಳತೆ ಮಾಡಲಿವೆ. ಈ ತಿಂಗಳ ಆರಂಭದಲ್ಲಿ ಪ್ರಾರಂಭವಾದ ಈ ದತ್ತಾಂಶ ಸಂಗ್ರಹವು ವಿಜ್ಞಾನಿಗಳಿಗೆ ಭೂಮಿಯ ಸುತ್ತಲಿನ ಕಣಗಳ ನಡವಳಿಕೆ, ಸೌರ ಮಾರುತದ ಮೂಲ ಮತ್ತು ವೇಗವರ್ಧನೆ ಮತ್ತು ಬಾಹ್ಯಾಕಾಶ ಹವಾಮಾನ ವಿದ್ಯಮಾನಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸುತ್ತದೆ.

ಆದಿತ್ಯ-ಎಲ್​1 ನೌಕೆಯು ಎಲ್​1 ಬಿಂದುವನ್ನು ತಲುಪಿದ ನಂತರ, ಅದನ್ನು ಹಾಲೋ ಕಕ್ಷೆಯಲ್ಲಿ ಇರಿಸಲಾಗುತ್ತದೆ, ಸೂರ್ಯನಿಗೆ ನಿರಂತರ ಸಂಬಂಧಿತ ಸ್ಥಾನವನ್ನು ನಿರ್ವಹಿಸುತ್ತದೆ. ಈ ಎಲ್​ ಸ್ಥಳವೂ ಬಾಹ್ಯಾಕಾಶ ನೌಕೆಯು ತನ್ನ ಐದು ವರ್ಷಗಳ ಕಾರ್ಯಾಚರಣೆಯ ಅವಧಿಯ ಉದ್ದಕ್ಕೂ ಸೂರ್ಯನನ್ನು ನಿರಂತರವಾಗಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಇದು ನಿರ್ಣಾಯಕ ಸೌರ ಒಳನೋಟಗಳನ್ನು ಒದಗಿಸುತ್ತದೆ ಮತ್ತು ಸೌರ ಭೌತಶಾಸ್ತ್ರದ ಬಗ್ಗೆ ನಮ್ಮ ತಿಳುವಳಿಕೆಗೆ ಗಮನಾರ್ಹವಾಗಿ ಕೊಡುಗೆ ನೀಡಲಿದೆ. (ಏಜೆನ್ಸೀಸ್​)