ನ್ಯೂಸ್

ಒಂದು ದೇಶ, ಒಂದು ಚುನಾವಣೆ: ಸಮಿತಿ ಸದಸ್ಯರ ನೇಮಕವಾದ ಬೆನ್ನಲ್ಲೇ ವಿಘ್ನ?

ನವದೆಹಲಿ: ದೇಶದಲ್ಲಿ ಲೋಕಸಭೆ-ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಸಲುವಾಗಿ ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಒಂದು ದೇಶ ಒಂದು ಚುನಾವಣೆ ವ್ಯವಸ್ಥೆಗೆ ಆರಂಭದಲ್ಲಿ ವಿಘ್ನ ಎಂಬಂಥ ಪರಿಸ್ಥಿತಿ ಎದುರಾಗಿದೆ.

ಒಂದು ದೇಶ, ಒಂದು ಚುನಾವಣೆ ವಿಚಾರವಾಗಿ ಸಾಧಕ-ಬಾಧಕಗಳನ್ನು ಅರಿಯಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಿ, ನಿನ್ನೆ ಅದಕ್ಕೆ 7 ಸದಸ್ಯರನ್ನೂ ಆಯ್ಕೆ ಮಾಡಿತ್ತು. ಆದರೆ ಆ ಸಮಿತಿ ಸದಸ್ಯರಲ್ಲಿ ಒಬ್ಬರಾಗಿರುವ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಸದಸ್ಯರಾಗಲು ನಿರಾಕರಿಸಿದ್ದಾರೆ.

ಅಧೀರ್ ರಂಜನ್ ಒಂದು ದೇಶ ಒಂದು ಚುನಾವಣೆ ಕುರಿತ ಸಮಿತಿಯನ್ನು ಸೇರುತ್ತಿಲ್ಲ ಎಂದು ಕಾಂಗ್ರೆಸ್​ ಸಂಸದ ಕೆ.ಸಿ.ವೇಣುಗೋಪಾಲ ಖಚಿತಪಡಿಸಿದ್ದಾರೆ. ಭಾರತ ಸರ್ಕಾರ ಅದಾನಿ ವಿಷಯವನ್ನು ಬೇರೆಡೆಗೆ ತಿರುಗಿಸಲು ಬಯಸಿದ್ದು, ಅದಕ್ಕಾಗಿಯೇ ಅವರು ಈ ಎಲ್ಲ ಕೆಲಸಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ಈ ಕೆಲಸಗಳನ್ನು ಮಾಡುವಾಗ ಅವರು ಸಂಸದೀಯ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಸಂಪೂರ್ಣವಾಗಿ ಹಾಳುಮಾಡುತ್ತಿದ್ದಾರೆ ಎಂದು ವೇಣುಗೋಪಾಲ್ ಹೇಳಿದ್ದಾರೆ.

ದೇಶದ ಅತಿದೊಡ್ಡ ವಿರೋಧ ಪಕ್ಷದಿಂದ ಒಬ್ಬ ಸದಸ್ಯನನ್ನಷ್ಟೇ ಸಮಿತಿಗೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಚಿದಂಬರಂ ನಿನ್ನೆ ಅಸಮಾಧಾನ ವ್ಯಕ್ತಪಡಿಸಿದ್ದರು.