ಚೆನ್ನೈ: ಸಾರ್ವಜನಿಕ ಬದುಕಿನಲ್ಲಿರುವವರು ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲಿ ಮುಖ್ಯವಾಗಿ ಚಿತ್ರ ನಟ-ನಟಿಯರು ಎಂದು ಹೇಳಿದರೆ ತಪ್ಪಾಗಲಾರದು. ಇದೀಗ ತಮಿಳು ಚಿತ್ರರಂಗದ ಹಿರಿಯ ನಟ ವಿಜಯ್ಕುಮಾರ್ ಅವರ ಪುತ್ರಿ, ಬಿಗ್ಬಾಸ್ ಮಾಜಿ ಸ್ಪರ್ಧಿ ವನಿತಾ ವಿಜಯ್ಕುಮಾರ್ ಅವರು ಮದುವೆಯ ವಿಚಾರವಾಗಿ ಸದ್ದು ಮಾಡುತ್ತಿದ್ದು, ನಟಿ ವನಿತಾ ಸದಾ ತಮ್ಮ ವೈಯಕ್ತಿಕ ವಿಚಾರಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ.
ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದ ವನಿತಾ ವಿಜಯ್ಕುಮಾರ್ ಚಿತ್ರಗಳ ಮೂಲಕ ಖ್ಯಾತಿ ಪಡೆದಿರುವುದಕ್ಕಿಂತ ವಿವಾದಗಳ ಮೂಲಕ ಸದ್ದು ಮಾಡಿದ್ದೇ ಹೆಚ್ಚು. ಈಗಾಗಲೇ 3 ಬಾರಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವ ನಟಿ 4ನೇ ಬಾರಿ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವರ ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಇತ್ತೀಚಿಗೆ ಇನ್ಸ್ಟಾಗ್ರಾಂನಲ್ಲಿ ನಟಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಈ ವೇಳೆ ಅಭಿಮಾನಿಯೋರ್ವ ಮದುವೆ ಯಾವಾಗ ಎಂದು ಕೇಳಿದ್ದಾನೆ. ಇದಕ್ಕೆ ಮಾರ್ಮಿಕವಾಗಿ ಉತ್ತರಿಸಿದ ನಟಿ ಒಂದು ಅನಿರೀಕ್ಷಿತ ತಿರುವಿಗಾಗಿ ಕಾಯಿರಿ ಎಂದು ಹೇಳುವ ಮೂಲಕ ನಾಲ್ಕನೇ ಮದುವೆ ವಿಚಾರಕ್ಕೆ ಇಂಬು ನೀಡಿದ್ದಾರೆ. ಅಭಿಮಾನಿಗಳು ವರ ಯಾರಿರಬಹುದು ಎಂದು ತಲೆಕೆಡಿಸಿಕೊಂಡಿದ್ದು, ನಟಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.
ಅಂದಹಾಗೆ, ವನಿತಾ ಅವರು 2000ರಲ್ಲಿ ಆಕಾಶ್ ಎಂಬುವವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ 2005ರಲ್ಲಿ ಡಿವೋರ್ಸ್ ಪಡೆದು ಆಕಾಶ್ ಅವರಿಂದ ದೂರವಾದರು. ನಂತರ 2007ರಲ್ಲಿ ಉದ್ಯಮಿ ರಂಜನ್ ಆನಂದ್ ಎಂಬುವವರ ಜೊತೆಗೆ ವನಿತಾ ಎರಡನೇ ಮದುವೆಯಾದರು. ಆದರೆ 2012ರಲ್ಲಿ ಅವರೊಂದಿಗೂ ಹೊಂದಾಣಿಕೆ ಕೊರತೆಯಿಂದ ದಾಂಪತ್ಯಕ್ಕೆ ಕೊನೆ ಹಾಡಿದರು. ಬಳಿಕ 2020ರಲ್ಲಿ ಫೋಟೋಗ್ರಾಫರ್ ಪೀಟರ್ ಪೌಲ್ ಜೊತೆ ಮದುವೆಯಾದ ನಟಿ ಅದೇ ವರ್ಷ ಆತನಿಂದ ದೂರಾದರು.