ನ್ಯೂಸ್

ಅದೊಂದು ಕಾರಣಕ್ಕೆ ಬರುತ್ತಿದ್ದ ಆಫರ್​ಗೆ ಬಿತ್ತು ಬ್ರೇಕ್​! ನನ್ನ ಸಿನಿ ಕರಿಯರ್​ ಛಿದ್ರವಾಯ್ತು: ನಟಿ ಓಪನ್ ಟಾಕ್

ಮೋಹನ್​ ಶೆಟ್ಟಿ

ಕೇರಳ: ಕಳೆದ ಒಂದೆರೆಡು ವಾರಗಳಿಂದ ಮಾಲಿವುಡ್​ನಲ್ಲಿ ದೊಡ್ಡ ವಿವಾದವೊಂದು ಭುಗಿಲೆದಿದ್ದು, ಕಾಸ್ಟಿಂಗ್ ಕೌಚ್​ ಪದ ವ್ಯಾಪಕವಾಗಿ ಕೇಳಿಬರುತ್ತಿದೆ. ಪ್ರತ್ಯೇಕವಾಗಿ ಕೆ. ಹೇಮಾ ಕಮಿಟಿಯ ವರದಿ ಹೊರಬಿದ್ದ ಬೆನ್ನಲ್ಲೇ ಮಲಯಾಳಂ ಚಿತ್ರರಂಗದ ಸ್ಟಾರ್​ ನಟಿಮಣಿಯರು ಸೇರಿದಂತೆ ಇನ್ನಿತರರು ಸಹ ತಮಗಾದ ಲೈಂಗಿಕ ಕಿರುಕುಳ ಅನುಭವ ಕುರಿತು ಮುಕ್ತವಾಗಿ ಕ್ಯಾಮರಾ ಮುಂದೆ ಹಂಚಿಕೊಳ್ಳುತ್ತಿದ್ದಾರೆ. ಇವರೇ, ಇಂಥವರೇ ನನ್ನ ಕಣ್ಣೀರಿಗೆ ಕಾರಣವಾಗಿದ್ದು ಎಂಬ ನಟಿಯರ ಸ್ಫೋಟಕ ಹೇಳಿಕೆಗಳು ಸದ್ಯ ಭಾರತೀಯ ಚಿತ್ರರಂಗವನ್ನೇ ಭಾರೀ ಆತಂಕಕ್ಕೆ ದೂಡಿದೆ. ಮಾಲಿವುಡ್​ನ ನಟಿ ಮಿನು ಮುನೀರ್, ಗೀತಾ ವಿಜಯನ್​, ಶ್ರೀದೇವಿಕಾ ಸೇರಿದಂತೆ ಹಲವು ಹೀರೋಯಿನ್​ಗಳು ತಾವು ಅನುಭವಿಸಿದ ಕೆಟ್ಟ ಅನುಭವಗಳನ್ನು ಹಂಚಿಕೊಳ್ಳುವುದಕ್ಕೆ ಇದೇ ಸೂಕ್ತ ಸಮಯವೆಂದು ಭಾವಿಸಿ, ಬಹಿರಂಗವಾಗಿ ಆರೋಪಿಸುತ್ತಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್​ ವಿಷಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಮಾಲಿವುಡ್​ನ ಘನತೆ, ಗೌರವಕ್ಕೆ ಕಪ್ಪುಚುಕ್ಕೆ ತಂದ ಬೆನ್ನಲ್ಲೇ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಟ ಮೋಹನ್ ಲಾಲ್ ರಾಜೀನಾಮೆ ಘೋಷಿಸಿದರು. ನಟನ ಬೆನ್ನಲ್ಲೇ ಸಮಿತಿಯ ಸದಸ್ಯರೆಲ್ಲರೂ ಒಟ್ಟಾಗಿ ರಾಜೀನಾಮೆ ಸಲ್ಲಿಸಿದ್ದು, ಕಮಿಟಿಯನ್ನು ವಿಸರ್ಜಿಸಿದ್ದಾರೆ. ಇದು ಸದ್ಯ ಮಲಯಾಳಂ ಚಿತ್ರರಂಗವನ್ನು ಕಂಗಾಲಾಗುವಂತೆ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಆಗ್ರಹ ಪ್ರತಿಧ್ವನಿಸುತ್ತಿದೆ. ಇನ್ನು ಇದೇ ರೀತಿಯ ಕೆಟ್ಟ ಅನುಭವ ನನಗೂ ಆಗಿದೆ ಎಂದಿರುವ ಮಲಯಾಳಂ ನಟಿ ಉಶಾ, ಅಂದು ನನ್ನ ಜತೆ ಆ ಹಿರಿಯ ನಟ ಅಸಭ್ಯವಾಗಿ ನಡೆದುಕೊಂಡ. ಇದನ್ನು ಸಹಿಸದ ನಾನು ತಕ್ಷಣವೇ ಆತನ ಕೆನ್ನೆಗೆ ಹೊಡೆದಿದ್ದೆ ಎಂದಿದ್ದಾರೆ.

"ನಾನು ನನ್ನ ಲಗೇಜ್ ಅನ್ನು ಲಿಫ್ಟ್‌ನಲ್ಲಿಟ್ಟುಕೊಂಡು ಹೋಗುತ್ತಿರುವಾಗ, ನನ್ನೊಂದಿಗೆ ಬಂದ ಹಿರಿಯ ನಟ ಆ ಸಮಯವನ್ನು ದುರುಪಯೋಗ ಪಡಿಸಿಕೊಳ್ಳಲು ಮುಂದಾದರು. ನನ್ನೊಂದಿಗೆ ಅನುಚಿತವಾಗಿ ವರ್ತಿಸುವ ಉದ್ದೇಶದಿಂದ ನಾವು ಕೆಳಗೆ ಹೋಗುತ್ತಿದ್ದೇವೆಯೇ ಎಂದು ಲಿಫ್​ ಬಗ್ಗೆ ನನ್ನ ಕೇಳಿದರು. ಇದಕ್ಕೆ ನಾನು ಹೌದು ಎಂದೇ ಹೇಳಿದೆ. ಒಮ್ಮೆ ಲಿಫ್ಟ್ ಬಾಗಿಲು ಮುಚ್ಚುತ್ತಿದ್ದಂತೆ ಆತ ನನ್ನ ಹತ್ತಿರ ತುಂಬಾ ಅಸಭ್ಯವಾಗಿ ವರ್ತಿಸಿದರು. ಇದರಿಂದ ಕೋಪಗೊಂಡ ನಾನು ಕೂಡಲೇ ಆತನ ಕಪಾಳಕ್ಕೆ ಹೊಡೆದು ಡೋರ್​ ತೆರೆಯುತ್ತಿದ್ದಂತೆ ಮುಂದಿನ ಮಹಡಿಗೆ ಹೋದೆ. ಆಗ ನನ್ನ ಬೆನ್ನಿಗೆ ನಿಂತಿದ್ದು ನಟ ಮೋಹನ್​ಲಾಲ್ ಮತ್ತು ಸುಕುಮಾರಿ. ಅಂದು ಆ ಹಿರಿಯ ನಟನ ವಿರುದ್ಧ ನಾನು ತೆಗೆದುಕೊಂಡ ನಿರ್ಧಾರಕ್ಕೆ ನನಗೆ ಸಿಕ್ಕ ಪಟ್ಟ ಸೊಕ್ಕಿನ ಹೀರೋಯಿನ್. ಅದಾದ ಬಳಿಕ ಚಿತ್ರರಂಗದಲ್ಲಿ ಮುಂದುವರೆಯಲು ಬಹಳ ಕಷ್ಟವಾಯಿತು. ಬರುತ್ತಿದ್ದ ಅವಕಾಶಗಳೆಲ್ಲವೂ ನಿಂತುಹೋಯಿತು" ಎಂದು ಅಳಲು ತೋಡಿಕೊಂಡಿದ್ದಾರೆ.

ಏನಿದು ಹೇಮಾ ಸಮಿತಿ ವರದಿ? ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಕೇರಳ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್​ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ. ಮಲಯಾಳಂ ಸಿನಿರಂಗದ ಒಂದೊಂದೆ ಕರಾಳ ಮುಖವಾಡ ಕಳಚಿ ಬೀಳುತ್ತಿದೆ. ಸಿನಿಮಾದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿದೆ. ಆದರೆ, ಸಿನಿಮಾರಂಗದಲ್ಲಿ ವ್ಯಾಪಕವಾಗಿದೆ ಎನ್ನುತ್ತಾರೆ ನೊಂದ ಮಹಿಳೆಯರು. ಸಿನಿಮಾದಲ್ಲಿ ಅವಕಾಶ ಬೇಕಾದರೆ ಕಾಮತೃಷೆ ತೀರಿಸಬೇಕು ಎನ್ನುತ್ತಾರೆ ನೊಂದ ಕಲಾವಿದೆಯರು,(ಏಜೆನ್ಸೀಸ್​).