

ಲಾಹೋರ್: ಭಾರತೀಯ ಮಾಜಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಜತೆ ದಾಂಪತ್ಯ ಜೀವನ ಮುರಿದು ನೆಟ್ಟಿಗರ ತೀವ್ರ ಟೀಕೆ, ವ್ಯಂಗ್ಯಕ್ಕೆ ಗುರಿಯಾಗಿದ್ದ ಪಾಕಿಸ್ತಾನ ಕ್ರಿಕೆಟ್ನ ಮಾಜಿ ಆಟಗಾರ ಶೋಯಿಬ್ ಮಲಿಕ್, ಇದೀಗ ಮತ್ತೊಂದು ಅಚ್ಚರಿ ಹೇಳಿಕೆ ಮೂಲಕ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದಾರೆ. ಈ ಹಿಂದೆಯೇ ಪಾಕಿಸ್ತಾನ ಪರ ಆಡಲು ನಾನು ಬಯಸುವುದಿಲ್ಲ ಎಂದು ಹೇಳಿದ್ದ ಮಲಿಕ್, ಈಗ ಮತ್ತೆ ಅದೇ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ನನಗೆ ಪಾಕ್ ಜೆರ್ಸಿ ತೊಡುವ ಆಸಕ್ತಿಯೇ ಇಲ್ಲ ಎಂದು ನೇರವಾಗಿ ಪಿಸಿಬಿಗೆ ಅರ್ಥವಾಗುವಂತೆ ತಿಳಿಸಿದ್ದಾರೆ.
ಇದನ್ನೂ ಓದಿ: ಬೋಧಕೇತರ ನೌಕರರಿಗೆ ಯುಜಿಸಿ ವೇತನ ನೀಡಿ
"2024ರ ಐಸಿಸಿ ಟಿ20 ವಿಶ್ವಕಪ್‌ಗೂ ಮೊದಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನಗೆ ಆಯ್ಕೆ ಸಮಿತಿಯಲ್ಲಿ ಆಯ್ಕೆಗಾರನಾಗಿ ಕಾರ್ಯನಿರ್ವಹಿಸುವಂತೆ ಆಫರ್ವೊಂದನ್ನು ನೀಡಿತ್ತು. ಆದರೆ ಆ ಹುದ್ದೆಯನ್ನು ಅಲಂಕರಿಸುವ ಬಗ್ಗೆ ನಾನೇನು ಮಾತನಾಡದೆ, ಆನಂತರ ಅದನ್ನು ನಿರಾಕರಿಸಿದ್ದೆ. ನನ್ನ ಪ್ರಕಾರ, ಕ್ರಿಕೆಟಿಗನಾಗಿ ಸಕ್ರಿಯವಾಗಿರುವಾಗ ಆಯ್ಕೆಗಾರನಾಗುವುದು ಸರಿಯಲ್ಲ. ಹೀಗಿರುವಾಗ ಇದು ಸಾಧ್ಯವಿಲ್ಲ ಎಂದು ನನಗನಿಸಿತು" ಎಂದು ಹೇಳಿದರು.
"ಸದ್ಯದ ಮಟ್ಟಿಗೆ ನಾನು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದೇನೆ. ಟಿ20 ಕ್ರಿಕೆಟ್ ಮತ್ತು ಮುಂಬರುವ ದೇಶೀಯ ಟಿ20 ಟೂರ್ನಿಗಳಲ್ಲಿ ಮಾತ್ರ ಆಡಲು ಸಿದ್ಧನಿದ್ದೇನೆ. ನನಗೆ ಪಾಕಿಸ್ತಾನಕ್ಕಾಗಿ ಕಣಕ್ಕಿಳಿಯಲು ಇಷ್ಟವಿಲ್ಲ. ಪಾಕ್ನ ಜೆರ್ಸಿ ಧರಿಸಲು ನನಗೆ ಆಸಕ್ತಿಯೇ ಇಲ್ಲ. ದೇಶಿಯ ಕ್ರಿಕೆಟ್‌ನಲ್ಲಿ ಸ್ಪರ್ಧಿಸುವುದನ್ನು ಎಂದಿನಂತೆ ಮುಂದುವರೆಸುತ್ತೇನೆ. ಈ ಟೂರ್ನಿಗಳ ಜತೆ ಇನ್ನೂ ಒಂದಷ್ಟು ಲೀಗ್ಗಳಲ್ಲಿ ಸ್ಪರ್ಧಿಸುವ ಯೋಚನೆ ಮಾಡಿದ್ದೀನಿ. ಶೀಘ್ರವೇ ಅವರೊಂದಿಗೆ ಮಾತುಕತೆ ಮಾಡುತ್ತೇನೆ" ಎಂದು ಶೋಯಿಬ್ ಹೇಳಿದ್ದಾರೆ,(ಏಜೆನ್ಸೀಸ್).