ನ್ಯೂಸ್

ಸಪ್ತಗಿರಿಗೌಡಗೆ ತಾರಾ ಸಾಥ್! ಗಾಂಧಿನಗರ ಕ್ಷೇತ್ರದ ವಿವಿಧೆಡೆ ಭರ್ಜರಿ ಮತಯಾಚನೆ

ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಅವರನ್ನು ಭಾರಿ ಮತಗಳ ಅಂತರದಿಂದ ಗೆಲ್ಲಿಸಿ ವಿಧಾನಸಭಾಗೆ ಆಯ್ಕೆ ಮಾಡುವಂತೆ ಚಿತ್ರನಟಿ ತಾರಾ ಅನುರಾಧ ಮನವಿ ಮಾಡಿದ್ದಾರೆ.

ಗುರುವಾರ ಕ್ಷೇತ್ರದ ಕಾಟನ್​ಪೇಟೆಯ ಪ್ರಮುಖ ಪ್ರದೇಶಗಳಲ್ಲಿ ತಾರಾ ಮತಯಾಚಿಸಿದರು. ಸಪ್ತಗಿರಿಗೌಡ ಅವರ ಪತ್ನಿ ಶ್ರೇಯಾ, ಸಹೋದರಿ ಕವಿತಾ ಸೇರಿ ಪಕ್ಷದ ನೂರಾರು ಕಾರ್ಯಕರ್ತರು ತಾರಾ ಅವರಿಗೆ ಸಾಥ್ ನೀಡಿ, ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಕ್ಷೇತ್ರದ ಬಗ್ಗೆ ತಮ್ಮದೇ ಆದ ಕನಸುಗಳನ್ನು ಸಪ್ತಗಿರಿಗೌಡ ಇಟ್ಟುಕೊಂಡಿದ್ದಾರೆ. ಅವರ ಕನಸುಗಳು ನನಸಾಗಬೇಕಾದರೆ ಈ ಬಾರಿ ಇಲ್ಲಿನ ಮತದಾರರು ಬಿಜೆಪಿ ಅಭ್ಯರ್ಥಿಗೆ ಆಶೀರ್ವಾದ ಮಾಡಬೇಕು ಎಂದು ಹೇಳಿದರು.

ಸಪ್ತಗಿರಿಗೌಡರ ಪತ್ನಿ ಶ್ರೇಯಾ ಮಾತನಾಡಿ, ಪತಿಗೆ ಇದೊಂದು ಬಾರಿ ಅವಕಾಶ ಮಾಡಿಕೊಟ್ಟರೆ ಕ್ಷೇತ್ರದ ಮಗಳಾಗಿ ಕೆಲಸ ಮಾಡುವುದಾಗಿ ವಾಗ್ದಾನ ಮಾಡಿದರು. ಈ ವೇಳೆ ಮತದಾರರು ಸಕಾರಾತ್ಮಕವಾಗಿ ಸ್ಪಂದಿಸಿ, ಸಪ್ತಗಿರಿಗೌಡ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂದು ಭರವಸೆ ಕೊಟ್ಟರು.

ಇದಕ್ಕೂ ಮುನ್ನ ಸಪ್ತಗಿರಿಗೌಡ ಸುಭಾಷ್​ನಗರ, ರೈಲ್ವೆ ಕ್ವಾರ್ಟರ್ಸ್, ಕಸ್ತೂರಿನಗರ, ವಿ.ಎಸ್.ಟಿ. ಕಾಲನಿ ಸೇರಿ ಹಲವು ಪ್ರದೇಶಗಳಿಗೆ ವಾರ್ಡ್ ಅಧ್ಯಕ್ಷ ಮದನ್, ಬಿಜೆಪಿ ಮುಖಂಡರಾದ ಶ್ರೀನಿವಾಸ್, ಆನಂದ್ ಮತ್ತಿತರರ ಜೊತೆ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದರು.

ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿದ ಬಳಿಕ ಎಲ್ಲೆಡೆ ಬಿಜೆಪಿ ಅಲೆ ಸೃಷ್ಟಿಯಾಗಿದೆ. ಇದೇ ರೀತಿ ಗಾಂಧಿನಗರದಲ್ಲೂ ಬದಲಾವಣೆ ತರಬೇಕೆಂದು ಮತದಾರರು ತೀರ್ವನಿಸಿರುವುದರಿಂದ ಗೆಲ್ಲುವ ವಿಶ್ವಾಸವಿದೆ ಎಂದು ಸಪ್ತಗಿರಿಗೌಡ ಹೇಳಿದರು. ಶನಿವಾರ ಮತ್ತು ಭಾನುವಾರ ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿರುವುದು ಕಾರ್ಯಕರ್ತರಲ್ಲಿ ಹೊಸ ಹುರುಪು, ಹುಮಸ್ಸು ತಂದಿದೆ. ಗಾಂಧಿನಗರದ ಎಲ್ಲ ಮತದಾರರು ಮೋದಿ ಅವರನ್ನು ಕಣ್ತುಂಬಿಸಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ ಎಂದರು.

ನನಗೊಂದು ಬಾರಿ ಅವಕಾಶ ಮಾಡಿಕೊಟ್ಟರೆ ಕ್ಷೇತ್ರದಲ್ಲಿ ಬದಲಾವಣೆ ಮಾಡಿಯೇ ತೀರುತ್ತೇನೆ. ಇದಕ್ಕೆ ಎಲ್ಲ ಮತದಾರರು ಪೂರಕವಾಗಿ ಸ್ಪಂದಿಸಿದ್ದಾರೆ. ಮತದಾರರ ಉತ್ಸಾಹ ನೋಡಿದರೆ ಗಾಂಧಿನಗರದಲ್ಲಿ ಕಮಲ ಅರಳುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿದೆ ಎಂದು ಸಪ್ತಗಿರಿ ಗೌಡ ವಿಶ್ವಾಸ ವ್ಯಕ್ತಪಡಿಸಿದರು.