Actress Samantha: ಕಳೆದ ಒಂದು ವರ್ಷದಿಂದ ಆನಾರೋಗ್ಯ ಸಮಸ್ಯೆಯಿಂದಾಗಿ ತಮ್ಮ ಕೆಲಸಗಳಿಗೆ ತಾತ್ಕಾಲಿಕ ಬ್ರೇಕ್ ಕೊಟ್ಟಿರುವ ಟಾಲಿವುಡ್ ಬ್ಯೂಟಿ ಸಮಂತಾ ರುತು ಪ್ರಭು, ಸದ್ಯ ಸಿನಿಮಾಗಳಲ್ಲಿ ನಟಿಸುವುದರಿಂದ ದೂರ ಉಳಿದಿದ್ದಾರೆ. ಒಂದೆಡೆ ತಮ್ಮ ಆರೋಗ್ಯವನ್ನು ಮತ್ತು ಮತ್ತೊಂದೆಡೆ ವ್ಯವಹಾರವನ್ನು ನೋಡಿಕೊಳ್ಳುವುದರಲ್ಲಿ ಬಿಜಿಯಾಗಿರುವ ಸಮಂತಾ, ಹೊಸ ಹೊಸ ವಿಷಯಗಳನ್ನು ಹೇಳುವ ಪಾಡ್‌ಕ್ಯಾಸ್ಟ್‌ಗಳ ಜತೆ ಜತೆಯಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಈ ಮಧ್ಯೆ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಸಮಂತಾ, ಚಿತ್ರರಂಗದಲ್ಲಿ ತಮಗಾದ ಅನುಭವವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅನಾಥಾಶ್ರಮದಲ್ಲಿ ಬೆಳೆದವಳು ಇಂದು ಸ್ಟಾರ್ ಕ್ರಿಕೆಟರ್; ಆಸ್ಟ್ರೇಲಿಯಾ ಆಟಗಾರ್ತಿ Lisa Sthalekar ನಡೆದುಬಂದ ಹಾದಿಯೇ ರೋಚಕ
ಚಿತ್ರರಂಗದಲ್ಲಿನ ಮಹಿಳೆಯರ ಬಗ್ಗೆ ಮಾತನಾಡಿದ ಸಮಂತಾ, "ಸಿನಿ ಉದ್ಯಮ ನನ್ನ ಎರಡನೇ ಮನೆಯಂತೆ. ನಾನು ಮನೆಯನ್ನು ಸ್ವಚ್ಛವಾಗಿಡಬೇಕು. ಈಗಾಗಲೇ ನನ್ನದೇ ನಿರ್ಮಾಣ ಸಂಸ್ಥೆ ಕೂಡ ನಡೆಸುತ್ತಿದ್ದೇನೆ. ಹೀಗಿರುವಾಗ ಮಹಿಳೆಯರ ಸುರಕ್ಷತೆ ನನ್ನ ಜವಾಬ್ದಾರಿ, ಆದ್ಯತೆ. ಇದಲ್ಲದೆ, ಸಂಭಾವನೆಯೂ ಬಹಳ ಮುಖ್ಯ. ಚಿತ್ರರಂಗದಲ್ಲಿ ನನ್ನ ಜತೆ ಕೆಲಸ ಮಾಡಿದ ನಟರಿಗಿಂತ ನಾನು ಕಡಿಮೆ ಸಂಭಾವನೆ ಪಡೆದಿದ್ದೇನೆ. ಹಲವು ವರ್ಷಗಳ ಅನುಭವವಿದ್ದರೂ ನನಗೆ ಅತ್ಯಂತ ಕಡಿಮೆ ಸಂಭಾವನೆಯನ್ನೇ ನೀಡಲಾಯಿತು" ಎಂದು ಬೇಸರ ಹೊರಹಾಕಿದರು.
"ಈಗ ನನ್ನ ನಿರ್ಮಾಣ ಸಂಸ್ಥೆಯಲ್ಲಿಯೂ ಇದು ಮರುಕಳಿಸಬಾರದು ಎಂಬುದೇ ನನ್ನ ಉದ್ದೇಶ. ನಾನು ಲಿಂಗ ಸಮಾನತೆಗೆ ಮೊದಲ ಆದ್ಯತೆ ನೀಡ್ತೇನೆ. ನಮ್ಮ ಪ್ರೊಡಕ್ಷನ್ ಹೌಸ್ನಲ್ಲಿ ಎಲ್ಲರಿಗೂ ಒಂದೇ ರೀತಿಯ ವೇತನ ನೀಡಲಾಗುತ್ತದೆ. ಇದಕ್ಕೆ ಕಾರಣ, ನನ್ನ ಅನುಭವ. ನನ್ನಂತೆ ಇನ್ಯಾವ ಮಹಿಳೆಯೂ ಇಂತಹ ಪರಿಸ್ಥಿತಿ ಅನುಭವಿಸವುದು ಬೇಡ. ನಮ್ಮ ಸಂಸ್ಥೆಯಲ್ಲಿ ಪುರುಷ ಮತ್ತು ಮಹಿಳಾ ಕಲಾವಿದರು, ಕೆಲಸಕಾರರು ಎಲ್ಲರೂ ಸಮಾನರು ಎಂದೇ ನಾನು ಭಾವಿಸೋದು" ಎಂದು ಹೇಳಿದರು.
"ಮಹಿಳೆಯರು ಮದುವೆಯಾಗಿ ಮಕ್ಕಳು ಮಾಡಿಕೊಂಡು ಸಮಾಜದ ಮಧ್ಯೆ ಬದುಕಬೇಕು. ಸದ್ಯ ಇಂತಹ ಸಮಾಜದಲ್ಲಿಯೇ ನಾವು ವಾಸಿಸುತ್ತಿದ್ದೇವೆ. ಇದೇ ಜೀವನದ ದೊಡ್ಡ ಗುರಿಯಾಗಿಬಿಟ್ಟಿದೆ. ನಾನೂ ಕೂಡ ಅಲ್ಲಿಂದಲೇ ಬಂದಿದ್ದೇನೆ. ಆದರೆ, ಇದು ತಪ್ಪು. ಕೇವಲ ಮದುವೆಯಾಗಿ, ಮಕ್ಕಳು ಮಾಡಿಕೊಳ್ಳುವುದೇ ಬದುಕಿನ ಗುರಿಯಲ್ಲ. ಒಬ್ಬ ಮಹಿಳೆ ತನ್ನಿಂದ ಸಾಧ್ಯವಾದಷ್ಟು ಕೆಲಸ ಮಾಡಬೇಕು, ಉನ್ನತ ಮಟ್ಟಕ್ಕೆ ಏರಬೇಕು, ಈ ಮೂಲಕ ಸಂತೋಷ ಜೀವನ ಕಾಣಬೇಕು" ಎಂದಿದ್ದಾರೆ ಸಮಂತಾ. ಸದ್ಯ ನಟಿ ನೀಡಿದ ಹೇಳಿಕೆಗಳು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ,(ಏಜೆನ್ಸೀಸ್).