ಅನಾಥಾಶ್ರಮದಲ್ಲಿ ಬೆಳೆದವಳು ಇಂದು ಸ್ಟಾರ್​ ಕ್ರಿಕೆಟರ್; ಆಸ್ಟ್ರೇಲಿಯಾ ಆಟಗಾರ್ತಿ Lisa Sthalekar ನಡೆದುಬಂದ ಹಾದಿಯೇ ರೋಚಕ

Lisa Sthalekar
Published on

ನವದೆಹಲಿ: ಹಾಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್​ನಲ್ಲಿ ತಮ್ಮ ಅಮೋಘ ವಿಶ್ಲೇಷಣೆಯ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಮಾಜಿ ಆಟಗಾರ್ತಿ ಲಿಸಾ ಸ್ಥಾಲೇಕರ್ (Lisa Sthalekar) ಅವರು ತಮ್ಮ ವೃತ್ತಿಜೀವನದ ಅವಿಭಾಜ್ಯ ಅವಧಿಯಲ್ಲಿ ಪ್ರಸಿದ್ಧ ಆಟಗಾರ್ತಿಯಾಗಿದ್ದರು. ನಿವೃತ್ತಿಯ ಬಳಿಕ ಹೆಚ್ಚು ಖ್ಯಾತಿ ಪಡೆದಿರುವ ಲಿಸಾ ಅವರು ಭಾರತ ಮೂಲದವರು ಎಂಬುದು ಮತ್ತಷ್ಟು ವಿಶೇಷವಾಗಿದೆ. 

ಮಹಾರಾಷ್ಟ್ರದ ಪುಣೆ ಮೂಲದವರಾದ ಲಿಸಾ ಸ್ಥಾಲೇಕರ್ (Lisa Sthalekar) ಅವರ ಮೂಲ ಹೆಸರು ಲೈಲಾ. ಲೈಲಾಳಿಂದ ಅವರು ಹೇಗೆ ಲಿಸಾ ಆದರು ಮತ್ತು ಅವರ ಅದೃಷ್ಟವು ಅವಳನ್ನು ಭಾರತದ ಅನಾಥಾಶ್ರಮದಿಂದ ಆಸ್ಟ್ರೇಲಿಯನ್ ಕ್ರಿಕೆಟ್‌ನ ಉನ್ನತ ಶ್ರೇಣಿಗೆ ಹೇಗೆ ತಲುಪಿದರು ಎಂಬ ಕಥೆಯು ರೋಚಕವಾಗಿದ್ದು, ಸಿಂಡ್ರೆಲ್ಲಾದಂತಹ ಮಕ್ಕಳ ಕಾಲ್ಪನಿಕ ಕಥೆಯನ್ನು ಹೋಲುತ್ತದೆ.

ಲೈಲಾ ಅವರು 1979ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು. ಹುಟ್ಟಿದ ಕೂಡಲೇ ಆಕೆಯನ್ನು ಆಸ್ಪತ್ರೆ ಬಳಿ ಇದ್ದ ಕಸದ ಬುಟ್ಟಿಯಲ್ಲಿ ಇರಿಸಿ ಆಕೆಯ ತಂದೆ-ತಾಯಿ ಹೊರಟು ಹೋಗಿದ್ದರು. ಕಸದ ಬುಟ್ಟಿಯಲ್ಲಿ ಮಗು ಇರುವುದನ್ನು ಗಮನಿಸಿದ ವ್ಯಕ್ತಿಯೊಬ್ಬರು ಶ್ರೀವತ್ಸ ಎಂಬ ಅನಾಥಾಶ್ರಮಕ್ಕೆ ಸೇರಿಸಿ ಮಗುವಿಗೆ ಲೈಲಾ ಎಂದು ನಾಮಕರಣ ಮಾಡಿದರು.

Lisa Sthalekar

ವರ್ಷ ಕಳೆದಂತೆ ಗಂಡು ಮಗುವನ್ನು ದತ್ತು ಪಡೆದಲು ಭಾರತಕ್ಕೆ ಬಂದಿದ್ದ ಅಮೆರಿಕ ಮೂಲದ ಹರೇನ್ ಸ್ಥಾಲೇಕರ್ ಮತ್ತು ಸ್ಯೂ ದಂಪತಿಗಳು ಪುಣೆಯಲ್ಲಿರುವ ಶ್ರೀವತ್ಸ ಅನಾಥಾಶ್ರಮಕ್ಕೆ ಭೇಟಿ ನೀಡಿದರು. ಬಳಿಕ ಗಂಡು ಮಗು ಸಿಗದ ಕಾರಣ ಕೆಲಕಾಲ ಆಶ್ರಮದಲ್ಲಿ ಕಾಲಕಳೆದ ದಂಪತಿ ಲೈಲಾಳನ್ನು ನೋಡಿ ಬಳಿಕ ನಿರ್ಧರಿಸಿ ದತ್ತು ಪಡೆದಿದ್ದಾರೆ. ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ದಂಪತಿಗಳು ಲೈಲಾಗೆ ಲಿಸಾ ಸ್ಥಾಲೇಕರ್ (Lisa Sthalekar) ಎಂದು ಮರುನಾಮಕರಣ ಮಾಡಿ ಅಮರಿಕಗೆ ಕರೆದೊಯ್ದರು. 

ಕೆಲ ವರ್ಷಗಳ ಬಳಿಕ ದಂಪತಿಗಳು ಕೆಲಸದ ನಿಮಿತ ಅಮೆರಿಕದಿಂದ ಆಸ್ಟ್ರೇಲಿಯಾಗೆ ಸ್ಥಳಾಂತರಗೊಂಡಿದ್ದು, ಆ ಬಳಿಕ ದಂಪತಿಗಳು ಸಿಡ್ನಿಯಲ್ಲಿ ಲಿಸಾರನ್ನು ಕ್ರಿಕೆಟ್ ಕೋಚಿಂಗ್​ಗೆ ಸೇರಿಸಿದ್ದಾರೆ. ಸಿಡ್ನಿ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದಿರುವ ಲಿಸಾ ತಮ್ಮ ಶಾಟ್ ಟೈಮಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಮೊದಲ ಬಾರಿಗೆ ವೆಸ್ಟ್ ಪೆನ್ನಂಟ್ ಹಿಲ್ಸ್ ಚೆರ್ರಿಬ್ರೂಕ್ ಕ್ರಿಕೆಟ್ ಕ್ಲಬ್‌ಗಾಗಿ ಆಡಿ ತಮ್ಮ ಪ್ರತಿಭೆಯನ್ನು ತೋಪರ್ಡಿಸಿದ್ದರು. 

ಆ ಬಳಿಕ ಆಸ್ಟ್ರೇಲಿಯಾ ಜೂನಿಯರ್ ತಂಡಕ್ಕೆ ಆಡಿದ ಲಿಸಾ 2001ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದರು. ಆ ಬಳಿಕ ಎರಡು ವಿಶ್ವಕಪ್​ ಗೆಲುವಿನಲ್ಲಿ ತಂಡದ ಭಾಗವಾಗಿದ್ದ ಲಿಸಾ ಮಹಿಳಾ ಕ್ರಿಕೆಟ್​ನಲ್ಲಿ 1000 ರನ್ ಗಳಿಸಿದ ಮತ್ತು 100 ವಿಕೆಟ್ ಪಡೆದ ಮೊದಲಿಗರು ಎಂಬ ದಾಖಲೆಯನ್ನು ಹೊಂದಿದ್ದಾರೆ. ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ನಾಯಕಿಯಾಗಿ ಬಡ್ತಿ ಪಡೆದ ಲಿಸಾ ಬೆಲಿಂಡಾ ಕ್ಲಾರ್ಕ್ ಪ್ರಶಸ್ತಿಯನ್ನು ಎರಡು ಬಾರಿ ಗೆದ್ದಿದ್ದಾರೆ. ಇದೀಗ ಮಹಿಳಾ ಟಿ20 ವಿಶ್ವಕಪ್​ನಲ್ಲಿ ತಮ್ಮ ಅಮೋಘ ವಿಶ್ಲೇಷಣೆಯ ಮೂಲಕ ಗಮನ ಸೆಳೆಯುತ್ತಿರುವ ಲಿಸಾ ಭಾರತ ಮೂಲದವರು ಎಂಬುದು ಎಲ್ಲರ ಹೆಮ್ಮೆಗೆ ಕಾರಣವಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net