ನ್ಯೂಸ್

ನೇಹಾ ಕನ್ನಡ ವ್ಯಾಮೋಹ ; ಕನ್ನಡದಲ್ಲಿ ಮತ್ತೆ ನಟಿಸಲು ಕಾಯುತ್ತಿದ್ದೇನೆ ಎಂದ ನಟಿ

| ಹರ್ಷವರ್ಧನ್ ಬ್ಯಾಡನೂರು

ಕನ್ನಡದ ‘ಬೈಪಾಸ್ ರೋಡ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ನೇಹಾ ಸಕ್ಸೇನಾ. ನಂತರ ತಮಿಳು, ತೆಲುಗು, ಮಲಯಾಳಂ, ತಲಾ ಒಂದು ಹಿಂದಿ ಹಾಗೂ ಸಂಸ್ಕೃತ ಸಿನಿಮಾ ಸೇರಿ 30ಕ್ಕೂ ಅಧಿಕ ಚಿತ್ರಗಳಲ್ಲಿ ಮಿಂಚಿದ್ದಾರೆ. ಇಂತಹ ನೇಹಾ ಕೆಲವು ವರ್ಷಗಳಿಂದ ಮಾಲಿವುಡ್‌ನಲ್ಲಿ ತುಂಬ ಬಿಜಿ. ಅದರ ನಡುವೆ ವಿಜಯವಾಣಿ ಜತೆ ಮಾತನಾಡಿದ ಅವರು, ಕನ್ನಡದಲ್ಲಿ ಮತ್ತೆ ನಟಿಸುವ ಆಸೆ ಹಂಚಿಕೊಂಡಿದ್ದಾರೆ.

  • ಮಲಯಾಳಂನಲ್ಲಿಯೇ ತುಂಬ ಬಿಜಿಯಾಗಿಬಿಟ್ಟಿದ್ದೀರಿ…
  • ಇತ್ತೀಚಿನ ವರ್ಷಗಳಲ್ಲಿ ಮಲಯಾಳಂನಲ್ಲಿ ಉತ್ತಮ ಅವಕಾಶಗಳು ದೊರೆಯುತ್ತಿವೆ. ಮೋಹನ್ ಲಾಲ್, ಮಮ್ಮೂಟಿ ಅವರಂತಹ ಸ್ಟಾರ್‌ಗಳ ಜತೆ ನಟಿಸುತ್ತಿದ್ದೇನೆ. ಈಗಲೂ ನಾಲ್ಕೈದು ಪ್ರಾಜೆಕ್ಟ್‌ಗಳಿವೆ. ಕೆಲವೇ ದಿನಗಳಲ್ಲಿ ಒಂದು ಚಿತ್ರದ ಶೂಟಿಂಗ್ 45 ದಿನಗಳ ಕಾಲ ವಯನಾಡ್‌ನಲ್ಲಿ ನಡೆಯಲಿದೆ.
  • ‘ವೃಷಭ’ ಚಿತ್ರದಲ್ಲೂ ನಟಿಸುತ್ತಿದ್ದೀರಿ..
  • ಹೌದು, ನಂದ ಕಿಶೋರ್ ಅವರ ಪ್ಯಾನ್ ಇಂಡಿಯಾ ‘ವೃಷಭ’ ಚಿತ್ರದಲ್ಲಿ ಮೋಹನ್ ಲಾಲ್‌ಗೆ ಜೋಡಿಯಾಗಿ ನಟಿಸುತ್ತಿದ್ದೇನೆ. ಇದು ನಾನು ಅವರೊಂದಿಗೆ ನಟಿಸುತ್ತಿರುವ ಮೂರನೇ ಸಿನಿಮಾ. ಈ ಹಿಂದೆ ಅವರ ಜತೆ ನಟಿಸಿರುವ ಎರಡೂ ಚಿತ್ರಗಳು ಹಿಟ್ ಆಗಿವೆ. ಸದ್ಯ ‘ವೃಷಭ’ ಶೂಟಿಂಗ್ ಹಂತದಲ್ಲಿದೆ. ‘ಯಶೋಧ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಹೆಚ್ಚು ಪಾತ್ರದ ಬಗ್ಗೆ ಹೇಳುವಂತಿಲ್ಲ. ಭಾವನಾತ್ಮಕ, ಬೋಲ್ಡ್ ಪಾತ್ರ ಎನ್ನಬಹುದು.
  • ನಿಮ್ಮನ್ನು ಮತ್ತೆ ಕನ್ನಡದಲ್ಲಿ ಯಾವಾಗ ನೋಡಬಹುದು?
  • ಕನ್ನಡದಲ್ಲಿ ನಟಿಸುವ ಆಸೆಯಿದೆ. ನನ್ನ ಕರಿಯರ್ ಪ್ರಾರಂಭಿಸಿದ್ದೇ ಕರ್ನಾಟಕದಿಂದ. ಕನ್ನಡ ಮತ್ತು ತುಳು ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದು. ಅದೇ ನನಗೆ ಗುಡ್‌ಲಕ್ ಅಂತನ್ನಿಸುತ್ತದೆ. ಒಬ್ಬ ಪಂಜಾಬಿ ಹುಡುಗಿಯಾಗಿದ್ದರೂ ಕನ್ನಡದ ಜನ, ಚಿತ್ರರಂಗ ಸಪೋರ್ಟ್ ಮಾಡಿದರು. ನಟನೆಗೆ ಪ್ರಾಮುಖ್ಯತೆಯಿರುವ ಪಾತ್ರ ಸಿಕ್ಕರೆ ಖಂಡಿತ ನಟಿಸುತ್ತೇನೆ. ಸಂಭಾವನೆಗಿಂತ ನನಗೆ ಕಂಟೆಂಟ್ ಮುಖ್ಯ. ಕಮ್‌ಬ್ಯಾಕ್ ಮಾಡಿದರೆ ಹಾಗೆ ಬಂದು, ಹೀಗೆ ಹೋಗುವಂತೆ ಇರಬಾರದು. ಏನಾದರೂ ವಿಶೇಷವಿರಬೇಕು ಎಂಬುದು ನನ್ನ ಅಭಿಪ್ರಾಯ. ಹೀಗಾಗಿಯೇ ಕೆಲವು ಆರ್‌ಗಳು ಬಂದರೂ ನಾನು ಒಪ್ಪಿಕೊಂಡಿಲ್ಲ. ಗಟ್ಟಿ ಕಥೆ, ಗಟ್ಟಿ ಪಾತ್ರಕ್ಕಾಗಿ ಕಾಯುತ್ತಿದ್ದೇನೆ. ಆದಷ್ಟು ಬೇಗ ಬರುತ್ತೇನೆ.
  • ಕನ್ನಡ ಚಿತ್ರರಂಗವನ್ನು ಮಿಸ್ ಮಾಡಿಕೊಳ್ಳುತ್ತೀರಾ?
  • ನನಗೆ ಸಿನಿಮಾ ಜೀವನ ನೀಡಿದ್ದು ಕನ್ನಡ ಚಿತ್ರರಂಗ. ಹೀಗಾಗಿ ತುಂಬ ಮಿಸ್ ಮಾಡಿಕೊಳ್ಳುತ್ತೇನೆ. ಕೃತಜ್ಞತೆಯಿದೆ. ಡೆಹ್ರಾಡೂನ್‌ನಿಂದ ಬಂದ ಪಂಜಾಬಿ ಹುಡುಗಿಗೆ ಕನ್ನಡ ಚಿತ್ರರಂಗ ತುಂಬ ಸಪೋರ್ಟ್ ಮಾಡಿದ್ದಾರೆ. ನಾವು ಎಲ್ಲಿ ವಾಸಿಸುತ್ತಿದ್ದೇವೆ, ಆ ಜಾಗಕ್ಕೆ, ಅಲ್ಲಿನ ಜನರಿಗೆ ಕೃತಜ್ಞತೆ ಸಲ್ಲಿಸಬೇಕು ಅಂದರೆ, ನಾವು ಅಲ್ಲಿನ ಭಾಗವಾಗಬೇಕು. 2015ರಿಂದ ಹೆಚ್ಚು ಮಲಯಾಳಂನಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದೇನೆ. ಆದರೆ, ಬೆಂಗಳೂರಿನಲ್ಲೇ ನೆಲೆಸಿದ್ದೇನೆ. ಕಾಲೇಜು ದಿನಗಳಿಂದಲೂ ಕರ್ನಾಟಕ, ಬೆಂಗಳೂರಿನ ಜತೆ ಅವಿನಾಭಾವ ಸಂಬಂಧವಿದೆ.
  • ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ್ದೀರಿ…
  • ಇದುವರೆಗಿನ ಸಿನಿಮಾ ಪಯಣ ಚೆನ್ನಾಗಿದೆ. ಕರಿಯರ್ ಬೆಳವಣಿಗೆಯ ಬಗ್ಗೆ ಖುಷಿಯಿದೆ. ಯಾರನ್ನೂ, ಯಾವುದನ್ನೂ ದೂರುವುದಿಲ್ಲ. ಉತ್ತಮ ಪಾತ್ರಗಳಲ್ಲಿ ನಟಿಸಬೇಕು ಎಂಬುದಷ್ಟೇ ನನ್ನಾಸೆ.
  • ಹಲವು ಭಾಷೆಗಳಲ್ಲಿ ನಟಿಸಿದ್ದೀರಿ. ಆ ಎಲ್ಲ ಭಾಷೆಗಳನ್ನೂ ಕಲಿಯಲು ಹೇಗೆ ಸಾಧ್ಯವಾಯಿತು?
  • ನಾನು ಮೂಲತಃ ಪಂಜಾಬಿಯಾದ ಕಾರಣ ಪಂಜಾಬಿ ಗೊತ್ತು. ಹಿಂದಿ, ಇಂಗ್ಲೀಷ್, ಸಂಸ್ಕೃತ ಭಾಷೆಗಳನ್ನು ಶಾಲಾ ದಿನಗಳಲ್ಲಿ ಕಲಿತಿದ್ದೆ. ಚಿತ್ರರಂಗಕ್ಕೆ ಬಂದ ಬಳಿಕ ಕನ್ನಡ, ತಮಿಳು, ತೆಲುಗು, ಮಲಯಾಳಂ, ಭೋಜ್‌ಪುರಿ, ಮರಾಠಿ ಹೀಗೆ ಹಲವು ಭಾಷೆಗಳನ್ನು ಕಲಿತೆ. ಯಾವುದೂ ಅಸಾಧ್ಯವಲ್ಲ. ಕಷ್ಟಪಟ್ಟರೆ ಎಲ್ಲವೂ ಸಾಧ್ಯ. ರಾತ್ರೋರಾತ್ರಿ ಯಾರೂ ಸ್ಟಾರ್ ಆಗಲು ಸಾಧ್ಯವಲ್ಲ. ಗುರಿಯ ಮೇಲೆ ಗಮನ ಕೇಂದ್ರೀಕರಿಸಿ, ನಮ್ಮನ್ನು ನಾವು ಅರ್ಪಿಸಿಕೊಂಡರೆ ಅಂದುಕೊಂಡಿರುವುದನ್ನು ಸಾಧಿಸಬಹುದು.