ಆಂಧ್ರಪ್ರದೇಶ: ತೆಲುಗು ಚಿತ್ರರಂಗದಲ್ಲಿ 'ಸೀತಾ ರಾಮಂ' ಚಿತ್ರದ ಮುಖೇನ ಸಿನಿಪ್ರೇಕ್ಷಕರ ಮನಗೆದ್ದ ನಟಿ ಮೃಣಾಲ್ ಠಾಕೂರ್, ಇದೀಗ ತಮ್ಮ ಹೊಸ ಚಿತ್ರಕ್ಕಾಗಿ ಹೆಚ್ಚಿನ ಸಂಭಾವನೆ ಕೇಳಿದ್ದಾರೆ ಎಂಬ ಸುದ್ದಿ ಸದ್ಯ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
'ಸೀತಾ ರಾಮಂ' ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ಮೃಣಾಲ್ ಠಾಕೂರ್, ಅಲ್ಪ ಅವಧಿಯಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡು ಎಲ್ಲರ ಗಮನಸೆಳೆದಿದ್ದಾರೆ. ಮೊದಲ ಚಿತ್ರದಲ್ಲೇ ಉತ್ತಮ ಯಶಸ್ಸನ್ನು ಪಡೆದ ಮೃಣಾಲ್ಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶಗಳು ಒದಗಿ ಬಂದರೂ, ಎಲ್ಲವನ್ನು ಕೈಗೆತ್ತಿಕೊಳ್ಳದೆ ಒಳ್ಳೆಯ ಸ್ಕ್ರಿಪ್ಟ್ಗಳತ್ತ ಹೆಚ್ಚು ಗಮನಹರಿಸುತ್ತಿದ್ದಾರೆ.
ಪ್ರಸ್ತುತ ತಮ್ಮ ಮುಂದಿನ ತೆಲುಗು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಮೃಣಾಲ್, ನ್ಯಾಚುರಲ್ ಸ್ಟಾರ್ ನಾನಿ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಮಧ್ಯೆ, ಪರಶುರಾಮ್ ಪೆಟ್ಲಾ ನಿರ್ದೇಶನದ ವಿಜಯ್ ದೇವರಕೊಂಡ ನಟನೆಯ ಚಿತ್ರಕ್ಕೂ ಇವರೇ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಸದ್ಯ ಹೊಸ ಚಿತ್ರವೊಂದರಲ್ಲಿ ಅಭಿನಯಿಸಲು ಮೃಣಾಲ್ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಸದ್ಯ ಟಾಲಿವುಡ್ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ,(ಏಜೆನ್ಸೀಸ್).