ನ್ಯೂಸ್

ಧೈರ್ಯ ಇದ್ದರೆ ಈ ವಿಡಿಯೋ ವೈರಲ್​ ಮಾಡಿ; ನೆಟ್ಟಿಗರಿಗೆ ಸವಾಲೆಸೆದ ನಟಿ ಜ್ಯೋತಿ ರೈ

ಹೈದರಾಬಾದ್: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ದೇಶಾದ್ಯಂತ​ ಭಾರಿ ಸದ್ದು ಮಾಡುತ್ತಿರುವಾಗಲೇ ಕನ್ನಡ ಕಿರುತೆರೆ ಲೋಕದ ಖ್ಯಾತ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಅಶ್ಲೀಲ ವಿಡಿಯೋ ಪ್ರಕರಣದಿಂದ ಮನನೊಂದಿರುವ ನಟಿ ಜ್ಯೀತಿ ರೈ ಬೇಸರದ ನಡುವೆಯೂ ಕಲಾವಿದರೊಬ್ಬರಿಗೆ ಸಹಾಯ ಮಾಡುವ ಮೂಲಕ ದೊಡ್ಡತನ ಮೆರೆದಿದ್ದಾರೆ.

ತೆಲುಗನ ಖ್ಯಾತ ಜನಪ್ರಿಯ ಗಾಯಕ ಪದ್ಮಶ್ರೀ ಪುರಸ್ಕೃತ ಕಿನ್ನೆರ ಮೊಗಿಲಯ್ಯ ಜೀವನ ನಿರ್ವಹಣೆಗಾಗಿ ಗಾರೆ ಕೆಲಸ ಮಾಡುತ್ತಿದ್ದರು. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು. ಗಾಯಕನ ಪರಿಸ್ಥಿತಿ ಕಂಡು ಹಲವರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದಕ್ಕೆ ಸಂಬಂಧಿಸಿದಂತೆ ನಟಿ ಜ್ಯೋತಿ ರೈ ಅವರು ಗಾಯಕನ ನೆರವಿಗೆ ಧಾವಿಸಿದ್ದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ನಟಿ, ಅಕ್ಷಯ ತೃತೀಯದ ಶುಭ ದಿನದಂದು, ಖ್ಯಾತಿಯ ಹೊರತಾಗಿಯೂ ಗಮನಾರ್ಹ ವೈಯಕ್ತಿಕ ಮತ್ತು ವೃತ್ತಿಪರ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಪದ್ಮಶ್ರೀ ಕಿನ್ನೆರ ಮೊಗಿಲಯ್ಯ ಅವರಿಗೆ ನಾನು 50 ಸಾವಿರ ರೂಪಾಯಿಗಳ ಆರ್ಥಿಕ ನೆರವನ್ನು ನೀಡಿದೆ.  ನಿನ್ನೆ ಅವರು ನಡೆಸಿದ ಸುದ್ದಿಗೋಷ್ಠಿಯಿಂದಾಗಿ ಅವರ ಕಷ್ಟಗಳು ನನಗೆ ತಿಳಿದು ಬಂತು. ಸದ್ಯಕ್ಕೆ ನಾನು ಸಹ ಕಷ್ಟದ ದಿನಗಳನ್ನು ಕಳೆಯುತ್ತಿದ್ದೇನೆ. ಆದರೆ ಅವರ ಕಷ್ಟ ಕೇಳಿದಾಗ ನನ್ನೊಳಗೆ ಬೆಳಗಿದ ಬೆಳಕು, ಮೊಗಿಲಯ್ಯ ಅವರನ್ನು ಭೇಟಿಯಾಗಿ ಸಹಾಯ ಮಾಡಲು ಪ್ರೇರೇಪಿಸಿತು. 

ಅವರಿಗೆ ಇನ್ನಷ್ಟು ಸಹಾಯ ಮಾಡುವ ಆಸೆಯಿದೆ. ನನ್ನಿಂದ ಸಾಧ್ಯವಾಗಿದ್ದನ್ನು ನಾನು ಮಾಡಿದ್ದೇನೆ. ಇನ್ಯಾರಿಗಾದರೂ ಮೊಗಿಲಯ್ಯ ಅವರಿಗೆ ಸಹಾಯ ಮಾಡುವ ಇಚ್ಛೆಯಿದ್ದರೆ ಬನ್ನಿ ಎಲ್ಲರೂ ಒಟ್ಟು ಸೇರಿ ಮಾಡೋಣ. ಈ ವೀಡಿಯೊವನ್ನು ವೈರಲ್ ಮಾಡಲು ನಿಮಗೆ ಧೈರ್ಯವಿದೆಯೇ. ಜಗತ್ತು ನನ್ನೆಡೆಗೆ ಅಂಧಕಾರವನ್ನು ದೂಡಿದಾಗ ನನ್ನೊಳಗಿನ ನಾನು ಇನ್ನಷ್ಟು ಪ್ರಕಾಶಮಾನವಾಗಿ ಹೊಳೆಯುತ್ತೇನೆ ಎಂದು ನಟಿ ಜ್ಯೋತಿ ರೈ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಜ್ಯೋತಿ ರೈ ಅವರದ್ದು ಎನ್ನಲಾದ ಕೆಲವು ಅಶ್ಲೀಲ ವಿಡಿಯೋ ಹಾಗೂ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನಟಿ ಜ್ಯೋತಿ ರೈ, ಅವು ನಕಲಿ ವಿಡಿಯೋಗಳು ಎಂದಿದ್ದು, ಆ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.