More

    ವಿರಾಟ್​ ಸಿಡಿಲಬ್ಬರದ ಬ್ಯಾಟಿಂಗ್​ಗೆ ರೆಕಾರ್ಡ್​ಗಳು ಉಡೀಸ್​; ಐಪಿಎಲ್​ನಲ್ಲಿ ಐತಿಹಾಸಿಕ ದಾಖಲೆ ಬರೆದ ಕಿಂಗ್​ ಕೊಹ್ಲಿ

    ಧರ್ಮಶಾಲಾ: ಮೇ 09ರಂದು ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್​ ಅಸೋಸಿಯೇಷನ್​ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು 60 ರನ್​ಗಳ ಭರ್ಜಿ ಜಯ ಗಳಿಸಿದ್ದು, ಪ್ಲೇಆಫ್​ ಹಾದಿಯನ್ನು ಸುಗಮವಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆರ್​ಸಿಬಿ ಹಾಗೂ ಪಂಜಾಬ್​ ಡನುವಿನ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದ್ದು, ಐಪಿಎಲ್​ನಲ್ಲಿ ಹೊಸ ರೆಕಾರ್ಡ್​ಗಳು ನಿರ್ಮಾಣಗೊಂಡಿವೆ.

    ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ ವಿರಾಟ್​ ಕೊಹ್ಲಿ (92 ರನ್, 47 ಎಸೆತ, 7 ಬೌಂಡರಿ, 6 ಸಿಕ್ಸರ್), ರಜತ್​ ಪಾಟೀದಾರ್ (55 ರನ್, 23 ಎಸೆತ, 3 ಬೌಂಡರಿ, 6 ಸಿಕ್ಸರ್), ಕ್ಯಾಮರೂನ್​ ಗ್ರೀನ್​ (46 ರನ್, 27 ಎಸೆತ, 5 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್​ ಫಲವಾಗಿ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 241 ರನ್​ ಗಳಿಸಿತ್ತು. ಬೃಹತ್​ ಗುರಿ ಬೆನ್ನತ್ತಿದ್ದ ಪಂಜಾಬ್​ ತಂಡವು 17 ಓವರ್​ಗಳಲ್ಲಿ 181 ರನ್​ಗಳಿಸಿ ಆಲೌಟ್​ ಆಗುವ ಮೂಲಕ ಸೋಲೊಪ್ಪಿಕೊಂಡಿತ್ತು. ಅಧಿಕೃತವಾಗಿ ಪ್ಲೇಆಫ್​ ರೇಸ್​ನಿಂದ ಹೊರಬಿತ್ತು.

    ಆರ್​ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್​ ಪಂಜಾಬ್​ ಫೀಲ್ಡರ್​ಗಳು ನೀಡಿದ ಜೀವದಾನದ ಲಾಭದಿಂದ 47 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್‌ ಸಹಿತ 92 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಆದರೆ ಕೇವಲ 8 ರನ್​ಗಳಿಂದ ಶತಕ ವಂಚಿತರಾದರು. ಅದಾಗ್ಯೂ ಈ ಪಂದ್ಯದಲ್ಲಿ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದರು.

    ಇದನ್ನೂ ಓದಿ: ಜಯತು ಜಯತು ಜೈ ಶ್ರೀರಾಮ್ ಹಾಡಿದ್ದಕ್ಕೆ ಥಳಿತ; ಸಂಸದ ಪ್ರತಾಪ್​ ಸಿಂಹ ಕಿಡಿ

    ಪಂದ್ಯದಲ್ಲಿ 92 ರನ್​ ಗಳಿಸುವ ಮೂಲಕ ವಿರಾಟ್​ ಕೊಹ್ಲಿ ಐಪಿಎಲ್​ನಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ 1,000 ರನ್​ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿರಾಟ್​ ಕೊಹ್ಲಿ ಮೂರು ತಂಡಗಳ ವಿರುದ್ಧ 1,000ಕ್ಕೂ ಅಧಿಕ ರನ್​ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿರಾಟ್​ ಪಂಜಾಬ್​ಗೂ ಮುನ್ನ ಚೆನ್ನೈ ಹಾಗೂ ಡೆಲ್ಲಿ ವಿರುದ್ಧ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ವಿರಾಟ್​ ಕೊಹ್ಲಿ ಐಪಿಎಲ್​ನಲ್ಲಿ ಮತ್ತೊಂದು ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಡೆಲ್ಲಿ ವಿರುದ್ಧ 1030 ರನ್, ಪಂಜಾಬ್ ವಿರುದ್ಧ 1020 ರನ್ ಮತ್ತು ಸಿಎಸ್‌ಕೆ ವಿರುದ್ಧ 1006 ರನ್ ಬಾರಿಸಿದ್ದಾರೆ. ವಿರಾಟ್​ ಹೊರತುಪಡಿಸಿ ರೋಹಿತ್​ ಶರ್ಮಾ ಹಾಗೂ ಡೇವಿಡ್​ ವಾರ್ನರ್​ ತಲಾ 2 ಎದುರಾಳಿ ತಂಡಗಳ ವಿರುದ್ಧ 1000 ಕ್ಕೂ ಹೆಚ್ಚು ರನ್ ದಾಖಲಿಸಿದ್ದಾರೆ.

    ಈ ಸೀಸನ್​ನಲ್ಲಿ ಕೊಹ್ಲಿ ಇಲ್ಲಿಯವರೆಗೆ ಒಟ್ಟು 634 ರನ್ ಬಾರಿಸಿದ್ದಾರೆ. ಇದರೊಂದಿಗೆ ಐಪಿಎಲ್‌ನ ಹೆಚ್ಚಿನ ಸೀಸನ್‌ಗಳಲ್ಲಿ ಜಂಟಿಯಾಗಿ 600ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇವರಲ್ಲದೆ ಕೆಎಲ್ ರಾಹುಲ್ ಕೂಡ ಈ ಸಾಧನೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್ 2013, 2016, 2023ರಲ್ಲಿ 600ಕ್ಕೂ ಹೆಚ್ಚು ರನ್ ಬಾರಿಸಿದ್ದರು. ಇವರಲ್ಲದೆ, ಕ್ರಿಸ್ ಗೇಲ್ ಮತ್ತು ಡೇವಿಡ್ ವಾರ್ನರ್ ತಲಾ 3 ಸೀಸನ್‌ಗಳಲ್ಲಿ 600+ ರನ್ ಬಾರಿಸಿದ್ದರೆ, ಫಾಫ್ ಡು ಪ್ಲೆಸಿಸ್ 2 ಸೀಸನ್‌ಗಳಲ್ಲಿ 600+ ರನ್ ದಾಖಲಿಸಿದ್ದಾರೆ.

    ಈ ಪಂದ್ಯದಲ್ಲಿ 6 ಸಿಕ್ಸರ್ ಬಾರಿಸಿದ ವಿರಾಟ್ ಕೊಹ್ಲಿ ಇದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ 400 ಸಿಕ್ಸರ್‌ಗಳನ್ನು ಪೂರೈಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಕೊಹ್ಲಿ 388 ಪಂದ್ಯಗಳ 371 ಇನ್ನಿಂಗ್ಸ್‌ಗಳಲ್ಲಿ 401 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts