ನ್ಯೂಸ್

ದಳಪತಿ ವಿಜಯ್ ರಾಜಕೀಯ ಪ್ರವೇಶ: ಬೆಂಬಲ ನೀಡಲಿರುವ ರಜಿನಿ, ಅಜಿತ್ ಅಭಿಮಾನಿಗಳು

ಚೆನ್ನೈ: ಕಾಲಿವುಡ್ ಸ್ಟಾರ್ ನಟ ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶವು ಒಂದು ದಶಕದಿಂದಲೂ ಹಾಟ್ ಟಾಪಿಕ್ ಆಗಿದೆ. ಆದರೆ ಅಂತಿಮವಾಗಿ ವಿಜಯ್ ಸಕ್ರಿಯ ರಾಜಕೀಯ ಪ್ರವೇಶವು 2024ರ ಚುನಾವಣೆಗೆ ಮುಂಚಿತವಾಗಿಯೇ ಆಗಲಿದೆ ಎಂದು ತೋರುತ್ತಿದೆ.

ಹೌದು, ಇಂದು ಬೆಳಗ್ಗೆ ವಿಜಯ್ ಅವರು ನೂರಾರು ಅಭಿಮಾನಿಗಳು ಮತ್ತು ಅವರ ಅಭಿಮಾನಿಗಳ ಸಂಘ ವಿಜಯ್ ಮಕ್ಕಳ್ ಇಯಕ್ಕಂ ಸದಸ್ಯರನ್ನು ಚೆನ್ನೈನಲ್ಲಿ ಭೇಟಿಯಾಗಿ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಚರ್ಚಿಸಿದರು.

ಸಭೆಯಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ವಿಜಯ್, ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ಮುಂದುವರಿಯಲು ಚಿತ್ರರಂಗಕ್ಕೆ ವಿದಾಯ ಹೇಳುವುದಾಗಿ ತಿಳಿಸಿದ್ದಾರೆ. ಒಟ್ಟಾರೆ ರಾಜಕೀಯ ಪಯಣದ ಮಾರ್ಗಸೂಚಿಯನ್ನು ಚರ್ಚಿಸಿದ ನಂತರ, ವಿಜಯ್ ಅವರ ರಾಜಕೀಯ ಪ್ರವೇಶ ಕನ್​​​ಫರ್ಮ್​​​ ಆಗಿದೆ. ಆದರೆ ಈ ಸಂಬಂಧ ವಿಜಯ್ ಅವರ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ ಎಂದು ವಿಜಯ್ ಹಿರಿಯ ಅಭಿಮಾನಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಷ್ಟೇ ಅಲ್ಲ, ತಮಿಳಿನ ಜನಪ್ರಿಯ ತಾರೆಯರಾದ ರಜನಿಕಾಂತ್ ಮತ್ತು ಅಜಿತ್ ಕುಮಾರ್ ಅವರ ಅಭಿಮಾನಿಗಳ ಬೆಂಬಲವೂ ಇದೆ ಎಂದು ವಿಜಯ್ ಅಭಿಮಾನಿಗಳು ಹೇಳಿದ್ದಾರೆ. ವಿಜಯ್ ಈಗಷ್ಟೇ ಲಿಯೋ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಬಹುಶಃ ಅವರ ಕೊನೆಯ ಸಿನಿಮಾ ದಳಪತಿ 68 ಮುಕ್ತಾಯಗೊಂಡ ನಂತರ ರಾಜಕೀಯ ಧುಮುಕಬಹುದು ಎಂಬ ಸುದ್ದಿ ಹರಿದಾಡುತ್ತಿದೆ.