ನ್ಯೂಸ್

ಇದನ್ನೆಲ್ಲ ಇಲ್ಲಿಗೆ ನಿಲ್ಲಿಸಿ! ಅಭಿಮಾನಿಗಳಲ್ಲಿ ನಟ ಸೂರ್ಯ ಮಾಡಿಕೊಂಡ ಕಳಕಳಿ ಮನವಿ ಇದು

ಮೋಹನ್​ ಶೆಟ್ಟಿ

ತಮಿಳುನಾಡು: ಒಂದು ಚಿಕ್ಕ ಗ್ಯಾಪ್ ನಂತರ ಇದೀಗ ತಮಿಳು ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ರಿಲೀಸ್​ಗೆ ಹಲವು ಸಿನಿಮಾಗಳು ಎದುರುನೋಡುತ್ತಿದ್ದು, ಈ ಸಾಲಿನಲ್ಲಿ ನಟ ಕಾರ್ತಿ ಅಭಿನಯದ 'ಮೀಯಾಳಗನ್' ಮುಂಚೂಣಿಯಲ್ಲಿದೆ. ಪ್ರೇಮ್ ಕುಮಾರ್​ ನಿರ್ದೇಶನದ ಚಿತ್ರದಲ್ಲಿ ಅರವಿಂದ್​ ಸ್ವಾಮಿ ಅವರೊಂದಿಗೆ ತೆರೆ ಹಂಚಿಕೊಂಡಿರುವ ಕಾರ್ತಿ, ಚಿತ್ರದ ಗೆಲುವಿನತ್ತ ಮುಖಮಾಡಿದ್ದಾರೆ. ಇನ್ನು ಈ ಸಿನಿಮಾದ ನಿರ್ಮಾಪಕರಲ್ಲಿ ತಾವು ಕೂಡ ಒಬ್ಬರಾಗಿರುವ ಸೂರ್ಯ, ಚಿತ್ರ ಅಭಿಮಾನಿಗಳಲ್ಲಿ ಒಂದು ವಿಶೇಷ ಹಾಗೂ ಕಳಕಳಿ ಮನವಿ ಮಾಡಿಕೊಂಡಿದ್ದಾರೆ.

ಚಿತ್ರೋದ್ಯಮದಲ್ಲಿನ ಪ್ರಮುಖ ಸಮಸ್ಯೆಯನ್ನು ಉದ್ದೇಶಿಸಿ ಮಾತನಾಡಿದ ಸೂರ್ಯ, ಬಾಕ್ಸ್ ಆಫೀಸ್ ಗಳಿಕೆಯನ್ನು ಮುಂದಿಟ್ಟು ಜಾಲತಾಣಗಳಲ್ಲಿ ಆಯಾ ಚಿತ್ರನಟರನ್ನು ಅವಮಾನಿಸಬೇಡಿ. ಆ ಚಿತ್ರ ಎಷ್ಟು ಗಳಿಸಿತು? ಅದೆಷ್ಟು ಕಲೆಕ್ಷನ್ ಮಾಡಿತು ಎಂದು ಆನ್​ಲೈನ್​ ಪ್ಲಾಟ್​ಫಾರ್ಮ್​ಗಳಲ್ಲಿ ಜಟಾಪಟಿ ನಡೆಸಬೇಡಿ. ಇದೆಲ್ಲವನ್ನೂ ಇಲ್ಲಿಗೆ ಬಿಟ್ಟುಬಿಡಿ. ಸಿನಿಮಾ ಮಾಡುವುದು ನೀವು ಆನಂದಿಸಲಿ ಎಂದೇ ಹೊರತು ವಿಮರ್ಶೆ ಮಾಡಿ, ಟೀಕಿಸಲು ಅಲ್ಲ. 'ಮೀಯಾಳಗನ್'​ ಸೇರಿದಂತೆ ಇತರೆ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ, ಥಿಯೇಟರ್ ಅನುಭವವನ್ನು ಪಡೆಯಿರಿ ಎಂದು ಕೇಳಿಕೊಂಡರು.

ಸಿನಿರಸಿಕರು ಹಾಗೂ ಅಭಿಮಾನಿಗಳಲ್ಲಿ ಸೂರ್ಯ ಮಾಡಿಕೊಂಡ ಮನವಿಗೆ ನೆಟ್ಟಿಗರು ಸಾಥ್ ನೀಡಿದ್ದಾರೆ. ಇದೇ ಸೆ.27ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ಸಜ್ಜಾಗಿರುವ ಮಿಯಾಳಗನ್​ ಚಿತ್ರದಲ್ಲಿ ಕಾರ್ತಿ, ಶ್ರೀದೇವಿ, ಅರವಿಂದ್ ಸ್ವಾಮಿ, ರಾಜ್​ಕಿರಣ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ,(ಏಜೆನ್ಸೀಸ್).