

ವಿಜಯಪುರ: ರಾಹುಲ್ ಗಾಂಧಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿರುವ ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ, ಇದು ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಮನಃಸ್ಥಿತಿಯನ್ನು ಬಹಿರಂಗಗೊಳಿಸಿದೆ ಎಂದರು.
ರಾಹುಲ್ ಗಾಂಧಿ ಯಾರಿಗೆ ಹುಟ್ಟಿದ್ದಾರೆ ಎನ್ನುವ ಮೂಲಕ ಬಿಜೆಪಿ ಶಾಸಕ ಯತ್ನಾಳ ತಮ್ಮ ಕೆಟ್ಟ ಮನಃಸ್ಥಿತಿಯನ್ನು ಪ್ರದರ್ಶನ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಓರ್ವ ಶಾಸಕ ರಾಹುಲ್ ಗಾಂಧಿ ಅವರನ್ನು ದೇಶ ದ್ರೋಹಿ ಎಂದರೆ ಇನ್ನೋರ್ವ ಕೇಂದ್ರ ಸಚಿವ ಇಂದಿರಾಗಾಂಧಿಗೆ ಆದ ಸ್ಥಿತಿಯೇ ರಾಹುಲ್ ಗಾಂಧಿಗೂ ಆಗಲಿದೆ ಎನ್ನುವ ಮೂಲಕ ತಮ್ಮ ಮನಃಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ. ಆದರೂ ಈವರೆಗೂ ಆರ್‌ಎಸ್‌ಎಸ್‌ನ ಯಾವೊಬ್ಬ ನಾಯಕನೂ ಚಕಾರವೆತ್ತಿಲ್ಲ. ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಅಂತರಾಳ ಬಹಿರಂಗಗೊಳಿಸಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಈ ಹಿಂದೆ ಇದೇ ಯತ್ನಾಳ ಮುಸ್ಲಿಂ ಟೋಪಿ ಧರಿಸಿ ಗಲ್ಲಿ ಗಲ್ಲಿ ತಿರುಗುತ್ತಿದ್ದಾಗ ಅಲ್ಲಿನ ಜನ ಇದೇ ರೀತಿ ಪ್ರಶ್ನೆ ಮಾಡಿದ್ದರು ಎಂಬುದನ್ನು ಯತ್ನಾಳ ಮರೆತಂತಿದೆ. ಯತ್ನಾಳರು ಯಾರಿಗೆ ಹುಟ್ಟಿದ್ದಾರೆಂದು ಆಗೆಲ್ಲ ಜನ ಆಡಳಿಕೊಳ್ಳುತ್ತಿದ್ದರೆಂಬುದು ನೆನಪಿರಲಿ ಎಂದು ಸೂಚ್ಯವಾಗಿ ಮತ್ತು ಖಾರವಾಗಿ ಪ್ರತಿಕ್ರಿಯಿಸಿದರು.
ಶಾಸಕ ಯತ್ನಾಳ ಹಗಲು- ರಾತ್ರಿ ಪಾಕಿಸ್ತಾನದ ಜಪ ಮಾಡುತ್ತಿರುತ್ತಾರೆ. ಹಾಗೊಂದು ವೇಳೆ ಯತ್ನಾಳರು ತಮ್ಮ ಮನೆ ದೇವರನ್ನು ಜಪಿಸಿದ್ದರೆ ಇಷ್ಟೊತ್ತಿಗಾಗಲೇ ದೇವರು ಪ್ರತ್ಯಕ್ಷ ವಾಗಿ ಬೇಡಿದ ವರವನ್ನಾದರೂ ನೀಡುತ್ತಿದ್ದನು ಎಂದು ಗಣಿಹಾರ ಲೇವಡಿ ಮಾಡಿದರು.
ದಲಿತರ ಬಗ್ಗೆ, ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಯತ್ನಾಳರಿಗೆ ಡಾ.ಅಂಬೇಡ್ಕರ್ ಅವರು ‘ಹಿಂದುವಾಗಿ ಹುಟ್ಟಿದ್ದೇನೆ, ಹಿಂದುವಾಗಿ ಸಾಯಲಾರೆ’ ಎಂದು ಕೊನೆಗೆ ಬೌದ್ಧ ಧರ್ಮ ಸ್ವೀಕಾರ ಮಾಡಿರುವುದು ಗೊತ್ತಿಲ್ಲವೇ? ಎಲ್ಲಿಯವರೆಗೆ ಅಸ್ಪಶ್ಯತೆ ಇರುವುದೋ ಅಲ್ಲಿಯವರೆಗೆ ಮೀಸಲಾತಿ ಇರಲಿದೆ. ಸಮಾನತೆ ಬಂದ ಮರುದಿನವೇ ಮೀಸಲಾತಿ ಇರಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅದನ್ನೇ ತಿರುಚಿ ಮೀಸಲಾತಿ ರದ್ದುಪಡಿಸುತ್ತಾರೆಂಬ ಗುಮಾನಿ ಹಬ್ಬಿಸುತ್ತಿದ್ದಾರೆ. ಇದು ಬಿಜೆಪಿಯ ವಾಟ್ಸಪ್ ಯುನಿವರ್ಸಿಟಿಯ ಹುನ್ನಾರ ಎಂದರು.
ಇನ್ನು ಟಿಪ್ಪು ಸುಲ್ತಾನ್‌ರ ಬಗ್ಗೆ ಮಾತನಾಡುವ ಯತ್ನಾಳ, ಟಿಪ್ಪು ಸುಲ್ತಾನರ ಕಾಲಿನ ಧೂಳಿಗೂ ಸಮನಲ್ಲ. ಟಿಪ್ಪು ಸುಲ್ತಾನ್‌ರ ಬಗ್ಗೆ ಮುಂದುವರಿದ ಬ್ರಾಹ್ಮಣ ಸಮುದಾಯದವರೇ ಅದ್ಭುತ ಇತಿಹಾಸ ರಚಿಸಿದ್ದಾರೆ. ಮೈಸೂರು ರಾಜ್ಯದಲ್ಲಿ ಈ ಹಿಂದೆ ಕುಪ್ಪಸ ಧರಿಸಲು ದಲಿತರು ತೆರಿಗೆ ಕಟ್ಟಬೇಕಿತ್ತು. ಅದನ್ನು ರದ್ದು ಪಡಿಸಿದವರು ಟಿಪ್ಪು ಸುಲ್ತಾನ್. ಜಾತಿ ವ್ಯವಸ್ಥೆ ಹೋಗಲಾಡಿಸಿ ಸಮಾನತೆ ತಂದವರು ಟಿಪ್ಪು ಸುಲ್ತಾನ್. ಬಡವರಿಗೆ ಭೂಮಿ ನೀಡಿದರು. ಕನ್ನಂಬಾಡಿ ಅಣೆಕಟ್ಟೆಗೆ ಅಡಿಪಾಯ ಹಾಕಿದರು. ಇಂಥ ಶ್ರೇಷ್ಠ ನಾಯಕ ಟಿಪ್ಪು ಸುಲ್ತಾನ್ ಹೆಸರು ಎತ್ತುವ ಯೋಗ್ಯತೆಯೂ ನಿಮಗಿಲ್ಲ ಎಂದು ಯತ್ನಾಳ ವಿರುದ್ದ ಗುಡುಗಿದರು.
ಯತ್ನಾಳರ ರಾಜಕೀಯ ಮುಕ್ತಾಯ ಆಗಲಿದೆ. ಆ ಟೈಮ್ ಬರಲಿದೆ. ಮೋಸದ ರಾಜಕೀಯಕ್ಕೆ ತೆರೆ ಬೀಳಲಿದೆ. ನಿಮ್ಮ ಪಕ್ಷದ ಬಗ್ಗೆಯೇ ನಿಮಗೆ ಅಭಿಮಾನವಿಲ್ಲ. ಹೀಗಾಗಿ ನಿಮ್ಮಲ್ಲಿ ದೇಶಾಭಿಮಾನ ಬರಲು ಹೇಗೆ ಸಾಧ್ಯ? ಈಶ್ವರಪ್ಪ ಅವರನ್ನೇ ಬಿಜೆಪಿ ಹೊರಹಾಕಿದೆ. ಅವರನ್ನು ಸಿಎಂ ಮಾಡುವುದಾಗಿ ಹೇಳಿದ್ದೀರಿ? ನಿಮ್ಮದೇ ನೆಲೆ ಇಲ್ಲ. ಹಿಂದೊಮ್ಮೆ ನಿಮ್ಮನ್ನೂ ಹೊರಹಾಕಿದ್ದರು. ಈಗ ಮತ್ತೆ ಹೊರಹಾಕುತ್ತಾರೆ. ಇಬ್ಬರೂ ಸೇರಿ ಒಂದೇ ದೋಣಿಯಲ್ಲಿ ಮುಳುಗುತ್ತೀರಿ ಎಂದರು.
ಮುಖಂಡ ರವಿ ಬಿರಾದಾರ ಮಾತನಾಡಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸಂವಿಧಾನದ ಮೇಲೆ ಗೌರವ ಇಲ್ಲ. ಕಾಂಗ್ರೆಸ್ ವಿರುದ್ಧ, ಅಲ್ಪಸಂಖ್ಯಾತರ ವಿರುದ್ಧ ಕುತಂತ್ರ ಮಾಡುವುದೇ ಆರ್‌ಎಸ್‌ಎಸ್ ಧ್ಯೇಯ ವಾಗಿದೆ. ಇತ್ತೀಚೆಗೆ 12 ನೇ ಶತಮಾನದಲ್ಲಿ ಶರಣರ ಚಳುವಳಿಯೇ ಆಗಿಲ್ಲವೆಂಬ ಪುಕಾರವೆಬ್ಬಿಸಿದ್ದಾರೆ. ಬಸವಾದಿ ಶರಣರು ಲಿಂಗಾಯತ ಧರ್ಮವನ್ನೇ ಹುಟ್ಟುಹಾಕಿಲ್ಲ ಎನ್ನುತ್ತಿದ್ದಾರೆ. ಇದೊಂದು ಹುನ್ನಾರ. ಶೀಘ್ರದಲ್ಲಿಯೇ ಈ ಹುನ್ನಾರಕ್ಕೆ ಉತ್ತರ ನೀಡುವುದಾಗಿ ತಿಳಿಸಿದರು.
ಮುಖಂಡ ಅಕ್ರಂ ಮಾಶಾಳಕರ ಇದ್ದರು.