ನ್ಯೂಸ್

'ಜೋವಿಯಲ್​ ಸ್ಟಾರ್​ ರಾಜ್ ತರುಣ್'​ ಚಿತ್ರಮಂದಿರದಲ್ಲಿ ನಗೆಪಾಟಲಿಗೀಡಾದ ನಟ!

ಮೋಹನ್​ ಶೆಟ್ಟಿ

ತೆಲಂಗಾಣ: 11 ವರ್ಷಗಳ ಲಿವ್​ಇನ್​ ರಿಲೇಷನ್​ಶಿಪ್​ನಲ್ಲಿದ್ದು, ಪ್ರೀತಿಸಿ, ಗುಟ್ಟಾಗಿ ಮದುವೆಯಾಗಿ ಇದೀಗ ತನಗೆ ಮೋಸ ಮಾಡಿದ್ದಾನೆ ಎಂದು ತೆಲುಗು ನಟ ರಾಜ್ ತರುಣ್ ವಿರುದ್ಧ ಗಂಭೀರ ಆರೋಪ ಹೊರಿಸಿರುವ ಪ್ರೇಯಸಿ ಲಾವಣ್ಯ, ತನಗೆ ರಾಜ್​ನಿಂದ ಅನ್ಯಾಯವಾಗಿದೆ. ಆತ ತನ್ನ ಸಹ ನಟಿಯಾದ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ, ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನಗೆ ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ ಎಂದು ಪಣತೊಟ್ಟಿರುವ ಲಾವಣ್ಯ ಒಂದೆಡೆಯಾದರೆ, ಪೊಲೀಸರು ಕಳಿಸಿರುವ ವಿಚಾರಣಾ ನೋಟಿಸ್​ಗೆ ಲಾಯರ್​ ಮೂಲಕ ಪ್ರತಿಕ್ರಿಯಿಸಿರುವ ರಾಜ್ ತರುಣ್​, ಮೊದಲ ವಿಚಾರಣೆಗೆ ಗೈರಾಗಿದ್ದರು. ಸದ್ಯ ಇವರಿಬ್ಬರ ವಿಚಾರದಲ್ಲಿ ದಿನಕ್ಕೊಂದು ಟ್ವಿಸ್ಟ್​ ಎದುರಾಗುತ್ತಿರುವ ಮಧ್ಯೆಯೇ ರಾಜ್ ಅಭಿನಯದ ಎರಡು ಬಹುನಿರೀಕ್ಷಿತ ಚಿತ್ರಗಳ ಪೈಕಿ ಒಂದು ಥಿಯೇಟರ್​ಗೆ ಲಗ್ಗೆಯಿಟ್ಟಿದೆ.

ಸದ್ಯ ಪುರುಷೋತ್ತಮುಡು ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದ್ದೇ ಆದರೂ ಚಿತ್ರರಸಿಕರಿಂದ ನಿರೀಕ್ಷಿಸಿದ ಪ್ರತಿಕ್ರಿಯೆಗಳು ಲಭಿಸುತ್ತಿಲ್ಲ. ಬದಲಿಗೆ ನಟನ ವಿರುದ್ಧ ಹಿಗ್ಗಾಮುಗ್ಗಾ ಟ್ರೋಲ್​, ಮೀಮ್​ಗಳು ಸಾಮಾಜಿಕ ಜಾಲತಾಣವನ್ನು ಸುತ್ತುವರೆದಿವೆ. ನಟಿ ಲಾವಣ್ಯಗೆ ಅನ್ಯಾಯ ಮಾಡಿರುವ ಆರೋಪದಡಿ ಸಿಲುಕಿರುವ ರಾಜ್​ ತರುಣ್​ರ ವಿವಾದವನ್ನೇ ಅಸ್ತ್ರವನ್ನಾಗಿಸಿಕೊಂಡ ಚಿತ್ರತಂಡ ಇದೇ ಸಮಯದಲ್ಲಿ ಆತ ನಟಿಸಿದ್ದ ಚಿತ್ರವನ್ನು ದಿಢೀರ್​ ತೆರೆಗೆ ತಂದಿದೆ. ವಿವಾದಗಳ ಅಲೆಯಲ್ಲಿ ಒದ್ದಾಡುತ್ತಿರುವ ರಾಜ್​ ತರುಣ್​ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಆಗಮಿಸಿದ ಪ್ರೇಕ್ಷಕರು, ಇದೀಗ ವ್ಯಾಪಕ ಟ್ರೋಲ್​ಗಳಿಗೆ ಸಾಕ್ಷಿಯಾಗಿದ್ದಾರೆ. ಇದಕ್ಕೆ ಕಾರಣ ಚಿತ್ರತಂಡ ನಟನಿಗೆ ಕೊಟ್ಟಿರುವ ಬಿರುದು.

ಚಿತ್ರದ ಪ್ರಾರಂಭದಲ್ಲಿ ಬೆಳ್ಳಿಪರದೆಯ ಮೇಲೆ ನಟನಿಗೆ 'ಜೋವಿಯಲ್ ಹೀರೋ ರಾಜ್ ತರುಣ್' ಎಂಬ ಬಿರುದನ್ನು ಚಿತ್ರತಂಡ ನೀಡಿದೆ. ಇದನ್ನು ನೋಡುತ್ತಿದ್ದಂತೆ ಬಿದ್ದು ಬಿದ್ದು ನಕ್ಕಿದ ಸಿನಿಪ್ರೇಕ್ಷಕರು, ಅವನಿಗ್ಯಾಕೆ ಜೋವಿಯಲ್ ಎಂಬ ಪಟ್ಟ? ಈ ಬಗ್ಗೆ ಚಿತ್ರತಂಡ ಸ್ವಲ್ಪ ಸ್ಪಷ್ಟನೆ ನೀಡುವುದು ಒಳಿತು. ಯಾರ ಪ್ರಕಾರ ಅವರು ಜೋವಿಯಲ್ ಆಗ್ತಾರೆ ಹೇಳಿ ಎಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಟೀಕಿಸಿದ್ದಾರೆ. ಟಾಲಿವುಡ್​ನಲ್ಲಿ ತಾನು ನಟಿಸಿದ ಚಿತ್ರಗಳೆಲ್ಲವೂ ಸಾಧಾರಣ ಪ್ರದರ್ಶನ ಕಂಡಿವೆ. ಹಲವು ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡುವಲ್ಲಿ ವಿಫಲಗೊಂಡಿವೆ. ಹೀಗಿದ್ದಾಗ ಹೇಗೆ ಆತನಿಗೆ ಇಂತಹ ಟೈಟಲ್ ಕೊಡ್ತೀರಾ ಎಂದು ಪ್ರಶ್ನಿಸಿದ್ದಾರೆ.

ಇದೆಲ್ಲದರ ಮಧ್ಯೆ ಟ್ರೋಲಿಗರು ನಟ ರಾಜ್​ ತರುಣ್​ ವಿವಾದವನ್ನು ಮುಂದಿಟ್ಟು ಹಾಗೂ ಚಿತ್ರಕ್ಕೆ ಸಂಬಂಧಿಸಿದಂತೆ ಭಾರೀ ಟ್ರೋಲ್, ಮೀಮ್​ಗಳನ್ನು ಮಾಡುವಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇಂತಹ ಟೀಕೆ, ಅವಮಾನಗಳು ಚಿತ್ರನಟ-ನಟಿಯರಿಗೆ ಸಾಮಾನ್ಯ. ಆದರೆ, ಅದ್ಭುತ ಯಶಸ್ಸಿನೊಂದಿಗೆ ಮಾತ್ರ ಈ ರೀತಿಯ ಅಪಮಾನಗಳನ್ನು ತೊಡೆದು ಹಾಕಲು ಸಾಧ್ಯ. ಸದ್ಯ ನಟ ರಾಜ್​ ತರುಣ್​ಗೆ ಬಂದಿರುವ ಸಂಕಷ್ಟ ತಪ್ಪುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ ಎಂಬುದು ಇತ್ತೀಚಿನ ಬೆಳವಣಿಗೆಗಳಿಂದ ತಿಳಿದುಬಂದಿದೆ,(ಏಜೆನ್ಸೀಸ್).