ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್-2024 ಕ್ರಿಕೆಟ್ ಟೂರ್ನಿಯಲ್ಲಿಯೂ ಕಳಪೆ ಪ್ರದರ್ಶನ ಮಾಡುತ್ತಿದೆ. ಇದಕ್ಕೆ ಆರ್‌ಸಿಬಿ ಅನ್‌ಬಾಕ್ಸಿಂಗ್ ಈವೆಂಟ್‌ಗೆ ಹೋಗಿದ್ದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಕಾರಣವೆಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದನು.
ಈ ಕೂಡಲೇ ಕೆಟ್ಟ ಪೋಸ್ಟ್ ಹಾಕಿದಾತನನ್ನು ಬಂಧಿಸುವಂತೆ ಆಗ್ರಹವೂ ಹೆಚ್ಚಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹ ಈ ಬಗ್ಗೆ ಪೋಸ್ಟ್ ಹಂಚಿಕೊಂಡು, ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದ್ದಾರೆ. ಇತ್ತ ಪುನೀತ್ ಅಭಿಮಾನಿಗಳು ನೀಡಿದ ದೂರು ಪೊಲೀಸ್ ಆಯುಕ್ತರನ್ನೂ ತಲುಪಿದೆ. ಸ್ಯಾಂಡಲ್‌ವುಡ್ ವಲಯದಿಂದಲೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಸಾಕಷ್ಟು ಸೆಲೆಬ್ರಿಟಿಗಳು ಬೆಂಬಲ ಸೂಚಿಸುತ್ತಿದ್ದಾರೆ. ಈಗ ಪುನೀತ್ ಅವರ ಆಪ್ತ ಬಳಗದಲ್ಲಿಯೇ ಗುರುತಿಸಿಕೊಂಡ ನವರಸ ನಾಯಕ ಜಗ್ಗೇಶ್ ಬೇಸರ ಹೊರಹಾಕಿದ್ದಾರೆ.‘
ಇದೆಲ್ಲದರ ನಡುವೆ ಸೋಷಿಯಲ್ ಮೀಡಿಯಾದಲ್ಲಿನ ಈ ಬೆಳವಣಿಗೆಗಳ ಬಗ್ಗೆಯೂ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದ ಅಶ್ವಿನಿ, "ಬೇರೆ ಆಪ್ಷನ್ನೇ ಇಲ್ಲ. ಜೀವನ ಸಾಗಲೇಬೇಕು. ಹಾಗಾಗಿ ಪಾಸಿಟಿವ್ ಮತ್ತು ನೆಗೆಟಿವ್ ಎರಡನ್ನೂ ಸಮಾನವಾಗಿಯೇ ಸ್ವೀಕರಿಸಿದ್ದೇನೆ. ಮುಂದೆಯೂ ಹಾಗೇ ಇರಲಿದೆ" ಎಂದಿದ್ದರು. ಕಾಮೆಂಟ್ ಮಾಡಿದವನಿಗೆ 'ಪುನೀತನ ಮಡದಿ ಅಣಕಿಸಿದ ನತದೃಷ್ಟರೆ ನಿಮಗೂ ತಾಯಿ ಇರಬೇಕು ಹಾಗು ತಾಯಿಬೆಲೆ ಗೊತ್ತಿರಬೇಕು' ಇದೇ ರೀತಿ ಕಾಮೆಂಟ್ ಮಾಡುತ್ತಿದ್ದಿರಾ ಎಂದು ನವರಸ ನಾಯಕ ಜಗ್ಗೇಶ್ ಪ್ರಶ್ನೆ ಮಾಡಿದ್ದಾರೆ.
ಜಗ್ಗೇಶ್ ಪೋಸ್ಟ್‌ನಲ್ಲೇನಿದೆ?
ಪುನೀತನ ಮಡದಿ ಅಣಕಿಸಿದ ನತದೃಷ್ಟರೆ ನಿಮಗೂ ತಾಯಿ ಇರಬೇಕು ಹಾಗು ತಾಯಿಬೆಲೆ ಗೊತ್ತಿರಬೇಕು..ಒಂದು ವೇಳೆ ತಾಯಿ ಹೆಣ್ಣು ಗೌರವ ಇಲ್ಲ ಎಂದರೆ ಕಂಡಿತ ಅಂಥವರು ಮನುಗುಲಕ್ಕೆ ಅನರ್ಹ! ಪುನೀತನ ಮಡದಿ ಅನಾಥಳಲ್ಲಾ ತನ್ನ ಪ್ರೀತಿಸುತ್ತಿದ್ದ ಕೋಟ್ಯಂತರ ಅಭಿಮಾನಿಗಳ ಬಳುವಳಿ ಕೊಟ್ಟು ಹೋಗಿದ್ದಾನೆ. ಹೆಣ್ಣುಕುಲಕ್ಕೆ ನೋವು ಕೊಟ್ಟವ ಉದ್ದಾರ ಆಗಿದ ಇತಿಹಾಸವಿಲ್ಲಾ! ಎಂದು ಪೋಸ್ಟ್ ಮಾಡಿದ್ದಾರೆ.