ನ್ಯೂಸ್

ರೇಣುಕಸ್ವಾಮಿ ಹತ್ಯೆ ಕೇಸ್; ಆರೋಪಿಗಳ ನ್ಯಾಯಾಂಗ ಬಂಧನ ಇಂದಿಗೆ ಅಂತ್ಯ, ಕೋರ್ಟ್​ಗೆ ಹಾಜರಾಗಲಿದ್ದಾರೆ ನಟ ದರ್ಶನ್​

ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ್ದು, ಪವಿತ್ರಾ ಗೌಡ, ಅನುಕುಮಾರ್​ ಹೊರತುಪಡಿಸಿ ಪ್ರಕರಣದ ಉಳಿದ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿಲ್ಲ. ಇಂದಿಗೆ (ಸೆಪ್ಟೆಂಬರ್​ 12) ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾಗಲಿದ್ದು, ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಇಂದು ಅರ್ಜಿ ವಿಚಾರಣೆ ನಡೆಸಲಿದ್ದು, ಬಳ್ಳಾರಿ ಜೈಲಿನ ಹೈ-ಸೆಕ್ಯುರಿಟಿ ಸೆಲ್​ನಿಂದ ನಟ ದರ್ಶನ್​ ವಿಡಿಯೋ ಕಾನ್ಫರೆನ್ಸ್​ ಮೂಲಕ ಹಾಜರಾಗಲಿದ್ದಾರೆ. ದರ್ಶನ್​​ಗಾಗಿ ಜೈಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮಾಡಿದ್ದಾರೆ. 12 ಗಂಟೆ ಬಳಿಕ ಕೋರ್ಟ್‌ಗೆ ರೇಣುಕಾಸ್ವಾಮಿ A-2 ಕೊಲೆ ಆರೋಪಿ ದರ್ಶನ್ ಕೋರ್ಟ್​​ಗೆ ಹಾಜರಾಗಲಿದ್ದಾರೆ.

ಸೆಪ್ಟೆಂಬರ್ 9ರಂದು ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಂಡಿತ್ತು. ಹೀಗಾಗಿ, ಅವರನ್ನು ಕೋರ್ಟ್ ಎದುರು ವಿಡಿಯೋ ಕಾನ್ಫರೆನ್ಸ್​ ಮೂಲಕ ಹಾಜರುಪಡಿಸಲಾಗಿತ್ತು. ಈ ವೇಳೆ ಚಾರ್ಜ್​ಶೀಟ್ ಪ್ರತಿಯನ್ನು ಆರೋಪಿ ಪರ ವಕೀಲರಿಗೆ ನೀಡಲಾಗಿತ್ತು. ಆ ಬಳಿಕ ಜಡ್ಜ್​ ನ್ಯಾಯಾಂಗ ಬಂಧನದ ಅವಧಿಯನ್ನು ಸೆಪ್ಟೆಂಬರ್ 12ರವರೆಗೆ ವಿಸ್ತರಣೆ ಮಾಡಿದ್ದರು.

ಸೆಪ್ಟೆಂಬರ್ 9ರಂದು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್​ಗೆ ಹಾಜರಾಗಿದ್ದ ಸರ್ಕಾರಿ ಪರ ವಕೀಲ ಪ್ರಸನ್ನ ಕುಮಾರ್​​ ಅವರು ಪ್ರಕರಣಕ್ಕೆ ಸಂಬಂಧಿಸಿ ಪ್ರಾಥಮಿಕ ಸಾಕ್ಷ್ಯಾಧಾರಗಳ ಸಲ್ಲಿಕೆ ಮಾಡಿದ್ದರು. ಇವುಗಳನ್ನು ಜಡ್ಜ್ ಪರಿಶೀಲನೆ ಮಾಡುವುದಾಗಿ ಹೇಳಿದ್ದರು. ಪೂರ್ತಿ ಚಾರ್ಜ್​ಶೀಟ್​ ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ದರ್ಶನ್ ಪರ ವಕೀಲರು ಹೇಳಿದ್ದರು. ಇನ್ನು ಶೀಘ್ರವೇ ದರ್ಶನ್ ಅವರು ಜಾಮೀನು ಅರ್ಜಿ ಸಲ್ಲಿಕೆ ಮಾಡಲಿದ್ದಾರೆ.

ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ 3991 ಪುಟಗಳ ಚಾರ್ಜ್​ಶೀಟ್​ಅನ್ನು ಸಲ್ಲಿಸಿದ್ದು, ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಹೇಳಿಕೆ ಉಲ್ಲೇಖ ಮಾಡಲಾಗಿದೆ. ಚಾರ್ಜ್​ಶೀಟ್​ನ ಒಂದೊಂದು ಪುಟ ತೆರೆದಂತೆ ಆರೋಪಿಗಳ ಕರಾಳ ಕೃತ್ಯ ಬೆಳಕಿಗೆ ಬರುತ್ತಿದ್ದು, ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಪ್ರಸಾರ ಮಾಡದಂತೆ ನಟ ದರ್ಶನ್​ ಹೈಕೋರ್ಟ್​ನಿಂದ ಸ್ಟೇ ತಂದಿದ್ದಾರೆ.