ಪಣಜಿ: ಸ್ನೇಹಿತನ ಪತ್ನಿಯನ್ನೇ ಗೆಸ್ಟ್ಹೌಸ್ವೊಂದಕ್ಕೆ ಕರೆತಂದು ಕೊಲೆ ಮಾಡಿ ಸುಳಿವು ಸಿಗದಂತೆ ಎಚ್ಚರಿಕೆ ವಹಿಸಿ ಪರಾರಿಯಾಗಿದ್ದ ಕೊಲೆಗಾರ ಕೊನೆಗೆ ಗೂಗಲ್ ಪೇ ವಹಿವಾಟಿನಿಂದಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಮಹಾರಾಷ್ಟ್ರದ ಸಾವಂತ್ವಾಡಿಯ ಶ್ರೇಯಾ ಶೈಲೇಶ್ ಮದ್ಖೋಳ್ಕರ್ (30) ಎಂಬಾಕೆ ಕೊಲೆಗೀಡಾದ ಮಹಿಳೆ. ಗಣೇಶ್ ವರ್ನೋಡ್ಕರ್ ಎಂಬಾತನೇ ಕೊಲೆ ಆರೋಪಿ. ಗೋವಾದಲ್ಲಿ ಈ ಕೊಲೆ ಪ್ರಕರಣ ನಡೆದಿದ್ದು, ಕೊನೆಗೂ ಕೊಲೆಗಾರ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.
ಈತ ಶ್ರೇಯಾಳನ್ನು ಮೇ 9ರಂದು ಗೋವಾದ ಅರಂಬೋಲ್ ಎಂಬಲ್ಲಿನ ಗೆಸ್ಟ್ಹೌಸ್ಕೆ ಕರೆದುಕೊಂಡಿದ್ದ ಬಂದಿದ್ದ. ಬಳಿಕ ಆಕೆಯನ್ನು ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ. ಗೆಸ್ಟ್ಹೌಸ್ ಬಾಡಿಗೆಗೆ ತೆಗೆದುಕೊಳ್ಳುವಾಗ ತನ್ನ ವಿವರಗಳನ್ನು ನೀಡದ ಆರೋಪಿ, ಆಕೆಯ ಐಡಿ ವಿವರ ನೀಡಿ ಬುಕ್ ಮಾಡಿದ್ದ. ಹೀಗಾಗಿ ಪೊಲೀಸರಿಗೆ ಕೊಲೆ ಆರೋಪಿಯ ಸುಳಿವು ಸಿಕ್ಕಿರಲಿಲ್ಲ.
ಆದರೆ ಆರೋಪಿ ಗೆಸ್ಟ್ಹೌಸ್ ಬಿಲ್ ಪಾವತಿಸುವಾಗ ಗೂಗಲ್ ಪೇ ಮೂಲಕ ಹಣ ಟ್ರಾನ್ಸ್ಫರ್ ಮಾಡಿದ್ದ. ಈ ವಹಿವಾಟಿನ ವಿವರಗಳನ್ನು ಕಲೆ ಹಾಕಿದ ಗೋವಾದ ಪೆರ್ನೆಂ ಪೊಲೀಸರು ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ. ಮೇ 9ಕ್ಕೆ ಗೆಸ್ಟ್ಹೌಸ್ಗೆ ಬಂದಿದ್ದ ಆರೋಪಿ, 13ರಂದು ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಮೇ 16ರಂದು ಶವ ಕೊಳೆತು ವಾಸನೆ ಬಂದು ರೂಮ್ಬಾಯ್ ಮಾಲೀಕರಿಗೆ ತಿಳಿಸಿದ್ದರಿಂದ ಪ್ರಕರಣ ಬಯಲಾಗಿದೆ. ಆರೋಪಿ ಆಕೆಯನ್ನು ಕರೆದುಕೊಂಡು ಬಂದಿದ್ಯಾಕೆ, ಕೊಲೆ ಮಾಡಿದ್ಯಾಕೆ ಎಂಬಿತ್ಯಾದಿ ಕುರಿತ ಖಚಿತ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.