ನ್ಯೂಸ್

ನಟ ದರ್ಶನ್​​​​​ ಜತೆ ರಘು ಜೈಲುಪಾಲು: ಕೊರಗಿನಲ್ಲೇ ಪ್ರಾಣಬಿಟ್ಟ ಆರೋಪಿ ತಾಯಿ ಶವಸಂಸ್ಕಾರಕ್ಕೂ ಪರದಾಟ!

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಸ್ಯಾಂಡಲ್​ವುಡ್​ ನಟ ದರ್ಶನ್ ಮತ್ತು ಆತನ ಸಹಚರರು ಇದೀಗ ಜೈಲುಪಾಲಾಗಿದ್ದಾರೆ. ಪ್ರಸ್ತುತ ಪರಪ್ಪನ ಅಗ್ರಹಾರದಲ್ಲಿರುವ ಆರೋಪಿ ದರ್ಶನ್​ಗೋಸ್ಕರ ರೇಣುಕಾಸ್ವಾಮಿಯನ್ನು ಹುಡುಕಿ, ಕಿಡ್ನ್ಯಾಪ್​ ಮಾಡಿದ್ದ ಚಿತ್ರದುರ್ಗದ ದರ್ಶನ್​ ಅಭಿಮಾನಿ ಸಂಘದ ಅಧ್ಯಕ್ಷ ಹಾಗೂ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ4 ಆರೋಪಿಯಾಗಿರುವ ರಘು ಅವರ ತಾಯಿ ಇಂದು ನಿಧನರಾಗಿದ್ದಾರೆ.

ರಘು ತಾಯಿ ಮಂಜುಳಮ್ಮ (65) ಮೃತ ದುರ್ದೈವಿ. ಚಿತ್ರದುರ್ಗದ ಕೋಳಿ ಬುರುಜನಹಟ್ಟಿ ನಿವಾಸದಲ್ಲಿ ಇಂದು (ಜುಲೈ 20) ಬೆಳಗಿನ ಜಾವ ತೀವ್ರ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಪುತ್ರ ಜೈಲು ಸೇರಿದ ದಿನದಿಂದು ಕಣೀರಿಟ್ಟಿದ್ದ ತಾಯಿ, ಅಂದಿನಿಂದಲೂ ಮಗನ ನೋವಿನಲ್ಲಿ ಕೊರಗಾಡುತ್ತಿದ್ದರು. ನರಳಾಟದಿಂದಲೇ ಮಂಜುಳಮ್ಮ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಇಂದು ತಮ್ಮ ನಿವಾಸದಲ್ಲಿ ಪ್ರಾಣ ಬಿಟ್ಟಿದ್ದಾರೆ.

ಇದ್ದೊಬ್ಬ ಮಗ ಈ ರೀತಿ ಜೈಲುಪಾಲಾಗುತ್ತಾನೆ ಅಂತ ಇಡೀ ಕುಟುಂಬ ಕನಸು-ಮನಸಿನಲ್ಲೂ ಎಣಿಸಿರಲಿಲ್ಲ. ನಟ ದರ್ಶನ್​ ಸೂಚನೆ ನೀಡಿದರು ಅಂತ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಲ್ಲಿ ಹುಡುಕಿ ಕರೆತರುವ ಮೂಲಕ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದು, ವಿಚಾರಾಣಾಧೀನ ಖೈದಿಯಾಗಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಸದ್ಯ ಆತನನ್ನೇ ನಂಬಿಕೊಂಡಿದ್ದ ಕುಟುಂಬಸ್ಥರಿಗೆ ಇದೀಗ ದಿಕ್ಕು ತೋಚದಂತಾಗಿದ್ದು, ಆರ್ಥಿಕವಾಗಿಯೂ ಸಂಕಷ್ಟದಲ್ಲಿದೆ.

ಇತ್ತೀಚೆಗಷ್ಟೇ ರೇಣುಕಸ್ವಾಮಿ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಮತ್ತೊಬ್ಬ ಆರೋಪಿ ಅನಿಲ್​ ಎಂಬಾತನ ತಂದೆ ಕೆಲ ದಿನಗಳ ಹಿಂದಷ್ಟೇ ಮಗ ಜೈಲುಪಾಲಾದ ನೋವಿನಿಂದ ಕೊರಗಿ ಮೃತಪಟ್ಟಿದ್ದರು. ಇದೀಗ ರಘು ತಾಯಿ ಕೂಡ ಅದೇ ರೀತಿ ಕೊನೆಯುಸಿರೆಳೆದಿದ್ದಾರೆ. ಇನ್ನು ಕೆಲ ಕುಟುಂಬಗಳು ಕಣ್ಣೀರಿನಲ್ಲೇ ನಿತ್ಯವೂ ಕೈತೊಳೆಯುತ್ತಿದೆ. ರಘು ತಾಯಿ ಶವಸಂಸ್ಕಾರಕ್ಕೆ ಕುಟುಂಬದವರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಎಂಥವರ ಮನಕಲಕುತ್ತದೆ.