ಚೆನ್ನೈ: ಮನೆಯ ಬಾಗಿಲ ಎದುರು ಮೂತ್ರ ವಿಸರ್ಜನೆ ಮಾಡಿದ್ದಲ್ಲದೆ, ಬಳಸಿದ ಮಾಸ್ಕ್ಗಳನ್ನು ಎಸೆದಿದ್ದಾಗಿ 62 ರ್ವದ ಹಿರಿಯ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಸಿಸಿ ಕ್ಯಾಮರಾದ ದೃಶ್ಯಗಳನ್ನು ಪೊಲೀಸರಿಗೆ ಒದಗಿಸಿದ್ದಾರೆ.
ಈ ಆರೋಪವೀಗ ಭಾರಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಏಕೆಂದರೆ ಈ ಆರೋಪ ಕೇಳಿ ಬಂದಿರುವುದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷರಾಗಿರುವ ಡಾ.ಸುಬ್ಬಯ್ಯ ಷಣ್ಮುಗಂ ವಿರುದ್ಧ.
ಇಷ್ಟೇ ಅಲ್ಲ, ಡಾ.ಸುಬ್ಬಯ್ಯ ಷಣ್ಮುಗಂ ಕಿಲಿಪಾಕ್ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ಮುಖ್ಯಸ್ಥರೂ ಆಗಿದ್ದಾರೆ. ಪಾರ್ಕಿಂಗ್ ಜಾಗಕ್ಕಾಗಿ ಉಂಟಾದ ವಿವಾದ ಅತಿರೇಕಕ್ಕೆ ಹೋಗಿದೆ.
ಅಡಂಬಾಕ್ಕಂ ಠಾಣೆ ವ್ಯಾಪ್ತಿಯಲ್ಲಿರುವ ಹೌಸಿಂಗ್ ಸೊಸೈಟಿಯಲ್ಲಿರುವ ಸುಬ್ಬಯ್ಯ, ನೆರೆಮನೆಯ ಮಹಿಳೆಗೆ ಸೇರಿದ ಪಾರ್ಕಿಂಗ್ ಜಾಗವನ್ನು ಬಳಸಿಕೊಳ್ಳಲು ಅನುಮತಿ ಕೇಳಿದ್ದಾರೆ. ತಿಂಗಳಿಗೆ 1,500 ರೂ. ಬಾಡಿಗೆ ನೀಡಿ ಬಳಸಿಕೊಳ್ಳಿ ಎಂದು ಆ ಮಹಿಳೆ ಹೇಳಿದ್ದಾಳೆ. ದುಡ್ಡು ಕೇಳಿದ್ದಕ್ಕೆ ಸಿಟ್ಟಾದ ಸುಬ್ಬಯ್ಯ ಹೀಗೆ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಸ್ಟ್ಯಾಂಡ್ ಅಪ್ ಕಾಮಿಡಿಯನ್ ವಿಜಯ್ ರಾಘವನ್ ತನ್ನ ಸಂಬಂಧಿಗಾದ ಸಂಕಷ್ಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಇದು ಭಾರಿ ವೈರಲ್ ಆಗಿದ್ದು, ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಬಲಪಂಥೀಯರ ವಿರುದ್ಧ ದೂರು ಕೇಳಿ ಬಂದರೆ ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸದಿರುವುದು ಸಾಮಾನ್ಯವಾಗಿದೆ. ರಾಜ್ಯ ಸರ್ಕಾರ ಎಲ್ಲರಿಗೂ ಸಮಾನ ನ್ಯಾಯ ಒದಗಿಸಲಿ ಎಂದು ಡಿಎಂಕೆ ನಾಯಕಿ ಕನಿಮೋಳಿ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ನ ವಿದ್ಯಾರ್ಥಿ ಸಂಘಟನೆಯಾದ ಎನ್ಎಸ್ಯುಐ ಸುಬ್ಬಯ್ಯ ವಿರುದ್ಧದ ಆರೋಪವನ್ನು ರಾಜಕೀಯ ಕಾರಣಕ್ಕೆ ಬಳಸಿಕೊಳ್ಳುತ್ತಿದೆ ಎಂದು ಎಬಿವಿಪಿ ಟೀಕಿಸಿದೆ. ಸದ್ಯ ಪೊಲಿಸರು ಎಫ್ಐಆರ್ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.