ನ್ಯೂಸ್

ಬ್ಲ್ಯಾಕ್​- ವೈಟ್​ ಬಳಿಕ ಯೆಲ್ಲೋ ಫಂಗಸ್ ಪತ್ತೆ! ಈ ಎರಡಕ್ಕಿಂತಲೂ ಹೆಚ್ಚು ಅಪಾಯಕಾರಿ ಯೆಲ್ಲೋ ಫಂಗಸ್​

ಉತ್ತರಪ್ರದೇಶ: ಕರೊನಾ ಭೀತಿಯಲ್ಲಿರುವ ಜನ ಫಂಗಸ್​ ಹೆಸರು ಕೇಳಿದ್ರೆ ಸಾಕು ಮತ್ತಷ್ಟು ಬೆಚ್ಚಿಬೀಳ್ತಾರೆ. ಬ್ಲ್ಯಾಕ್​ ಫಂಗಸ್​, ವೈಟ್​ ಫಂಗಸ್​ ಕಾಣಿಸಿಕೊಂಡು ತಲ್ಲಣ ಮೂಡಿಸಿದೆ. ಫಂಗಸ್​ಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೀಗ ಮತ್ತೊಂದು ವಿಧದ ಫಂಗಸ್​ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.

ಹೌದು, ಬ್ಲ್ಯಾಕ್​ ಫಂಗಸ್​, ವೈಟ್​ ಫಂಗಸ್​ನ ಅಟ್ಟಹಾಸ ಹೆಚ್ಚುತ್ತಿರುವಾಗಲೇ ಯೆಲ್ಲೋ ಫಂಗಸ್​ ಕಾಣಿಸಿಕೊಂಡಿದೆ. ಇದು ಇತರ ಫಂಗಸ್​ಕ್ಕಿಂತ ಹೆಚ್ಚು ಅಪಾಯಕಾರಿ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಯೆಲ್ಲೋ ಫಂಗಸ್​ನ ಮೊದಲ ಪ್ರಕರಣ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಪತ್ತೆಯಾಗಿದೆ. ದೇಹದಲ್ಲಿ ಆಂತರಿಕವಾಗಿ ಶುರುವಾಗುವ ಯೆಲ್ಲೋ ಫಂಗಸ್​, ದೇಹದ ಮೇಲೆ ಗಾಯಗಳಾಗಿ ಕೀವು ತರಿಸಬಹುದು. ಗಂಭೀರ ಸ್ವರೂಪಕ್ಕೆ ತಿರುಗಿದರೆ ಅಂಗಾಗ ವೈಫಲ್ಯವೂ ಆಗಬಹುದು. ಲಕ್ಷಣ ಕಂಡು ಬರುತ್ತಿದ್ದಂತೆ ನಿರ್ಲಕ್ಷಿಸದೆ ಆರಂಭದಲ್ಲೇ ಚಿಕಿತ್ಸೆ ಪಡೆಯಬೇಕು ಎಂದು ತಜ್ಞರು ಹೇಳಿದ್ದಾರೆ ಎಂದು ವರದಿಯಾಗಿದೆ.

ಲಕ್ಷಣ: ಅಲಸ್ಯ, ತೂಕ ಕಡಿಮೆ ಆಗುವುದು, ಹಸಿವಾಗದಿರುವುದು ಹಳದಿ ಶಿಲೀಂಧ್ರ ರೋಗದ ಸಾಮಾನ್ಯ ಲಕ್ಷಣ ಎಂದು ಹೇಳಗಿದೆ. ಕಣ್ಣು ಮಂಜಾಗುವುದು, ಕಾಣಿಸದಿರುವುದು, ಕೀವಾಗುವುದು, ಕೀವು ಸೋರಿಕೆ ಯೆಲ್ಲೋ ಫಂಗಸ್​ನ ತೀವ್ರ ಸ್ವರೂಪದ ಲಕ್ಷಣ. ಆರಂಭದಲ್ಲೇ ಚಿಕಿತ್ಸೆ ಪಡೆಯದಿದ್ದರೆ ಅಂಗಾಂಗ ವೈಫಲ್ಯ ಆಗಲಿದೆ ಎನ್ನಲಾಗಿದೆ.

ಕಳಪೆ ನೈರ್ಮಲ್ಯ, ಕಲುಷಿತ ಆಹಾರ, ಸ್ಟೀರಾಯ್ಡ್‌ಗಳ ಅತಿಯಾದ ಬಳಕೆ, ಕಲುಷಿತ ಆಕ್ಸಿಜನ್​ ಸೇವನೆ... ಹೀಗೆ ನಾನಾ ಕಾರಣಕ್ಕೆ ಫಂಗಸ್​ ಕಾಣಿಸಿಕೊಳ್ಳಲಿದೆ. ಕರೊನಾದಿಂದ ಗುಣಮುಖರಾದ ಬಳಿಕ ಕಾಣಿಸಿಕೊಳ್ಳುವ ಇತರ ರೋಗ ತಡೆಗೆ ಔಷಧ ತೆಗೆದುಕೊಳ್ಳವವರಿಗೆ ಇದು ಹೆಚ್ಚು ಅಪಾಯಕಾರಿ.