ಅಕ್ರಾ: ಪಶ್ಚಿಮ ಆಫ್ರಿಕಾದ ರಿಪಬ್ಲಿಕ್ ಆಫ್ ಘಾನಾದಲ್ಲಿ ಒಬ್ಬನೇ ವ್ಯಕ್ತಿ 533 ಜನರಿಗೆ COVID19 ಸಂಪರ್ಕದಾರನಾಗಿ ಕಂಡುಬಂದಿದ್ದಾನೆ ಎಂದು ಘಾನಾದ ಅಧ್ಯಕ್ಷ ನಾನಾ ಅಕುಫೋ ಅಡ್ಡೋ ಕಳವಳ ವ್ಯಕ್ತಪಡಿಸಿದ್ದಾರೆ.
COVID19 ವೈರಸ್ ಸೋಂಕು ಹರಡಿದ ವ್ಯಕ್ತಿ ಕಾರ್ಮಿಕ. ಆತ ಘಾನಾದ ಟೆಮಾ ಎಂಬ ಬಂದರು ಪಟ್ಟಣದಲ್ಲಿ ಮೀನಿನ ಫ್ಯಾಕ್ಟರಿಯ ಕೆಲಸಗಾರ. ಕಳೆದ ತಿಂಗಳ ಆತನ ಸ್ವಾಬ್ ಟೆಸ್ಟ್ ಮಾಡಿಸಿದ ಬಳಿಕ ಆತನಿಗೆ COVID19 ಸೋಂಕು ದೃಢಪಟ್ಟಿತ್ತು. ಹೀಗಾಗಿ ಅಲ್ಲಿನವರ ಎಲ್ಲರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ 921 ಮಾದರಿಗಳ ಪರೀಕ್ಷೆ ಬಾಕಿ ಉಳಿದಿತ್ತು. ಅದರ ಫಲಿತಾಂಶವೂ ಬಂದಿದ್ದು, ಆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕರಿಗೆ ಸೋಂಕು ತಗುಲಿದೆ ಎಂಬುದು ಖಾತ್ರಿಯಾಗಿದೆ ಎಂದು ಅಡ್ಡೋ ತಿಳಿಸಿದ್ದಾರೆ.
ಫ್ಯಾಕ್ಟರಿಯಲ್ಲಿದ್ದ ಈ ಕಾರ್ಮಿಕನ ಸಂಪರ್ಕಕ್ಕೆ ಬಂದವರ ಪೈಕಿ 533 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರೆಲ್ಲರ ಸಂಪರ್ಕವೂ ಈತನೊಬ್ಬನೇ ಎಂಬುದು ಕಳವಳಕಾರಿ ವಿಚಾರ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಆದಾಗ್ಯೂ, ಟೆಸ್ಟಿಂಗ್ ಮಾದರಿಯಲ್ಲಿ ಸುಧಾರಣೆ ತಂದಿರುವ ಕಾರಣ ಕೇಸ್ಗಳ ಸಂಖ್ಯೆ ಹೆಚ್ಚಳವಾದಂತೆ ಕಾಣಬಹುದು. ಆದರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇದುವರೆಗೆ ಘಾನಾದಲ್ಲಿ 1.6 ಲಕ್ಷ ಟೆಸ್ಟ್ಗಳನ್ನು ಮಾಡಿಸಲಾಗಿದೆ. ದೇಶಾದ್ಯಂತ ಒಟ್ಟು ಟೆಸ್ಟಿಂಗ್ ಕೇಂದ್ರಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತಿದೆ ಎಂದು ಅಧ್ಯಕ್ಷ ಅಡ್ಡಾ ತಿಳಿಸಿದ್ದಾರೆ.
ಆದಾಗ್ಯೂ, ಕರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ತೆಗೆದುಕೊಳ್ಳುತ್ತಿರುವ ಕ್ರಮಗಳು ಮತ್ತು ಅನುಸರಿಸುವ ಮಾನದಂಡಗಳ ಕುರಿತು ಅವರು ಪ್ರತಿಕ್ರಿಯಿಸಲಿಲ್ಲ. ಇದುವರೆಗೂ ಘಾನಾದಲ್ಲಿ ಒಟ್ಟು 4,700 ಕೇಸ್ಗಳು ಪತ್ತೆಯಾಗಿದ್ದು, ಈ ಪೈಕಿ 22 ಜನ ಮೃತಪಟ್ಟಿದ್ದಾರೆ. ಮಾರ್ಚ್ ತಿಂಗಳಲ್ಲಿ ಈ ದೇಶದಲ್ಲಿ ಕರೊನಾ ವೈರಸ್ ತನ್ನ ಇರುವಿಕೆಯನ್ನು ಮೊದಲ ಬಾರಿಗೆ ತೋರಿಸಿತ್ತು. (ಏಜೆನ್ಸೀಸ್)