ನ್ಯೂಸ್

ಕರೊನಾ ವ್ಯಾಕ್ಸಿನ್ ಕಳ್ಳ ದಂಧೆ ಮೇಲೆ ಕಣ್ಣಿಡಿ, ಮಾಹಿತಿ ಕೊಡಿ

arunakunigal

ಬೆಂಗಳೂರು: ಕರೊನಾ ನಿರೋಧಕ ಲಸಿಕೆ ಅಕ್ರಮಕ್ಕೆ ಸರ್ಕಾರ ಅವಕಾಶ ಕೊಡುವುದಿಲ್ಲ. ಸಾರ್ವಜನಿಕರು ವ್ಯಾಕ್ಸಿನ್ ಕಳ್ಳ ದಂಧೆ ಮೇಲೆ ಕಣ್ಣಿಟ್ಟು, ಮಾಹಿತಿ ನೀಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ‌ ಹೇಳಿದರು.

ಈ ಹಿಂದೆ ರೆಮ್ ಡೆಸಿವಿರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿತ್ತು. ಕಟ್ಟುನಿಟ್ಟಿನ ಕ್ರಮವಹಿಸಿದ ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಲಸಿಕೆ ವಿಚಾರದಲ್ಲೂ ಇದೇ ರೀತಿಯ ಕಾರ್ಯಾಚರಣೆ ನಡೆಯಲಿದೆ ಎಂದರು.

ಖಾಸಗಿಯವರು ಹೆಚ್ಚಿನ ದರದಲ್ಲಿ ಲಸಿಕೆ ಮಾರಾಟದ ವಿಷಯದಲ್ಲಿ ರಾಜ್ಯ ಸರ್ಕಾರ ಮಧ್ಯೆ ಪ್ರವೇಶಿಸಲಾಗದು. ಈ ವಿಷಯದಲ್ಲಿ ಕೇಂದ್ರ ಸರ್ಕಾರವೇ ಏಕರೂಪದ ನೀತಿ ರೂಪಿಸಬೇಕಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ‌ ಹೇಳಿದರು.

ಬಿಗಿ ಕ್ರಮಕ್ಕೆ ಸೂಚನೆ: ಕರೊನಾ 2ನೇ ಅಲೆ ಅಬ್ಬರ ತಗ್ಗಿಸಿ, ಸೋಂಕು ನಿಯಂತ್ರಿಸಲು 2ನೇ ಹಂತದ ಲಾಕ್​ಡೌನ್ ವಿಸ್ತರಣೆ ಸೋಮವಾರದಿಂದ ಜಾರಿಗೆ ಬಂದಿದ್ದು, ಬಿಗಿಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ. ಹಳ್ಳಿಗಳಲ್ಲಿ ಇದೀಗ ಲಾಕ್​ಡೌನ್ ಸರಿಯಾಗಿ‌ ಪಾಲನೆಯಾಗುತ್ತಿದೆ. ಪಟ್ಟಣ ಪ್ರದೇಶದಲ್ಲಿ ಇನ್ನಷ್ಟು ಬಿಗಿಯಾಗಬೇಕಾಗಿದೆ. ಕರೊನಾ ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾಗಲು ಜನರ ಸಹಕಾರವೂ ಮುಖ್ಯವೆಂದು ಬೊಮ್ಮಾಯಿ‌ ಹೇಳಿದರು.