ಲಖನೌ: ಅಪ್ರಾಪ್ತೆ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ್ದು, ಅದರ ವಿಡಿಯೋ ಚಿತ್ರೀಕರಣವನ್ನೂ ಮಾಡಿ ಬ್ಲಾಕ್ಮೇಲ್ ಮಾಡಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ನಡೆದಿದೆ. ಮತ್ತೆ ಕರೆದಾಗ ಬಾಲಕಿ ಬರಲಿಲ್ಲವೆನ್ನುವ ಸಿಟ್ಟಿಗೆ ಆತ ವಿಡಿಯೋವನ್ನು ವೈರಲ್ ಮಾಡಿರುವುದಾಗಿ ಹೇಳಲಾಗಿದೆ.
16 ವರ್ಷದ ಬಾಲಕಿ ಮೇವು ತರಲೆಂದು ಡಿಸೆಂಬರ್ 1 ರಂದು ಮನೆಯಿಂದ ಹೊರಗೆ ಹೋಗಿದ್ದಳು. ಆ ಸಮಯದಲ್ಲಿ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಹೊತ್ತೊಯ್ಯಲಾಗಿದೆ. ಅಲ್ಲಿ ಭುರಿ ಸಿಂಗ್ (28) ಹೆಸರಿನ ವ್ಯಕ್ತಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಕೃತ್ಯವನ್ನು ಈತನ ಸ್ನೇಹಿತ ಅನಿಲ್ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ನಂತರ ಅವರಿಬ್ಬರು ಆ ವಿಡಿಯೋವನ್ನು ಬಾಲಕಿಗೆ ತೋರಿಸಿ, ನೀನು ರೇಪ್ ಆದ ವಿಚಾರವನ್ನು ಹೊರಗಡೆ ಎಲ್ಲಾದರೂ ಹೇಳಿದರೆ ಈ ವಿಡಿಯೋವನ್ನು ವೈರಲ್ ಮಾಡಿಬಿಡುತ್ತೇವೆ ಎಂದು ಹೆದರಿಸಿದ್ದಾರೆ.
ಈ ಘಟನೆಯ ನಂತರ ಒಂದು ತಿಂಗಳ ಕಾಲ ಬಾಲಕಿಯನ್ನು ಆಗಾಗ ಕರೆಸಿಕೊಂಡು ರೇಪ್ ಮಾಡಲಾಗಿದೆ. ಬಾರದಿದ್ದರೆ ವಿಡಿಯೋ ವೈರಲ್ ಮಾಡುವ ಬೆದರಿಕೆಯನ್ನೂ ಹಾಕಲಾಗಿದೆ. ಇತ್ತೀಚೆಗೆ ಒಂದು ದಿನ ಅದೇ ರೀತಿ ಬರಲು ಕಾಮುಕರು ಹೇಳಿದ್ದು, ಆಗ ಬಾಲಕಿ ಬರುವುದಿಲ್ಲ ಎಂದು ಹೇಳಿದ್ದಾಳೆ. ಸಿಟ್ಟಿಗೆದ್ದ ಅವರು ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾಗಿ ಹೇಳಲಾಗಿದೆ. ಈ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭುರಿ ಸಿಂಗ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನಿಲ್ಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್)