ಕೊಲಂಬೋ: ಕಡು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ರೊಚ್ಚಿಗೆದ್ದ ಜನರನ್ನ ನಿಯಂತ್ರಿಸಲು ಮಿಲಿಟರಿ ಪಡೆ ಮತ್ತು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸದ್ಯ ಶ್ರೀಲಂಕಾದಲ್ಲಿ ಟಿವಿ ವಾಹಿನಿಗಳ ಪ್ರಸಾರ ಬಂದ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರತಿಭಟನಾ ಸ್ಥಳದಲ್ಲಿ ಗುಂಡಿನ ಶಬ್ದ ಕೇಳಿಸಿದ್ದು, ಪ್ರಾಣಭಯವನ್ನೂ ಲೆಕ್ಕಿಸದೆ ಜನರು ಸರ್ಕಾರದ ವಿರುದ್ಧ ದಂಗೆ ಎದ್ದಿದ್ದಾರೆ. ತುರ್ತುಪರಿಸ್ಥಿತಿ ಘೋಷಣೆಯಾಗಿದ್ದರೂ ಸಾವಿರಾರು ಮಂದಿ ಗುಂಪು ಕಟ್ಟಿಕೊಂಡು ಪ್ರತಿಭಟನೆಯಲ್ಲಿ ನಿರತವಾಗಿದ್ದು, ಭದ್ರತಾ ಸಿಬ್ಬಂದಿ ಅಶ್ರವಾಯು ಪ್ರಯೋಗಿಸುತ್ತಿದ್ದಾರೆ. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ಕಲ್ಲು ತೂರಾಟ ಮುಂದುವರಿದಿದೆ. ಕ್ಷಣಕ್ಷಣಕ್ಕೂ ಪರಿಸ್ಥಿತಿ ಉಗ್ರ ಸ್ವರೂಪ ಪಡೆಯುತ್ತಲೇ ಇದ್ದು, ಪ್ರತಿಭಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಲಂಕಾದ ರಾಜ್ಯಗಳಲ್ಲಿ ಪ್ರತಿಭಟನೆ ನಿಯಂತ್ರಿಸಲು ಆಗಮಿಸಿರುವ ಮಿಲಿಟರಿ ಪಡೆಯು ಮಾಧ್ಯಮ ಕೇಂದ್ರಗಳನ್ನು ತಮ್ಮ ವಶಕ್ಕೆ ಪಡೆದಿದೆ. ಶ್ರೀಲಂಕಾದ ಟಿವಿ, ರೇಡಿಯೋ ಕೇಂದ್ರಗಳನ್ನು ತನ್ನ ಸುಪರ್ದಿಗೆ ಪಡೆದಿರುವ ಲಂಕಾ ಮಿಲಿಟರಿಯು, ದೂರದರ್ಶನ ಪ್ರಸಾರ ಸ್ಥಗಿತ ಮಾಡಿದೆ. ಪ್ರತಿಭಟನೆ-ಹಿಂಸಾಚಾರ ತಡೆಯುವ ನಿಟ್ಟಿನಲ್ಲಿ ಮಾಹಿತಿ-ಕಾರ್ಯಕ್ರಮ ಪ್ರಸಾರ ಮಾಡದಂತೆ ಬಂದ್ ಮಾಡಿದೆ.
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿರುವ ಅಧ್ಯಕ್ಷ ಗೋತಬಯ ರಾಜಪಕ್ಸ ಅವರ ರಾಜೀನಾಮೆಗೆ ಒತ್ತಡ ಹೆಚ್ಚುತ್ತಲೇ ಇದೆ. ಬಂಧನ ಭೀತಿಯಲ್ಲಿ ಕುಟುಂಬ ಸಮೇತ ಅಜ್ಞಾತ ಸ್ಥಳಕ್ಕೆ ಗೋತಬಯ ಪರಾರಿಯಾಗಿದ್ದು, ಹಂಗಾಮಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ತುರ್ತುಪರಿಸ್ಥಿತಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ನಿವಾಸದ ಬಳಿ ಜನಾಕ್ರೋಶ ಭುಗಿಲೆದ್ದಿದೆ. ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದು, ಗುಂಡಿನ ಸದ್ದಿಗೂ ಬಗ್ಗದ ಜನ ಹೋರಾಟ ಮುಂದುವರಿಸಿದ್ದಾರೆ.