ಶಿಡ್ಲಘಟ್ಟ: ಲೇಡಿ ಪಿಎಸ್ಐ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರದ ಕುರುಬರ ಪೇಟೆ ನಿವಾಸಿ ವೆಂಕಟೇಶ್‍ಬಾಬು ಮೃತ ದುರ್ದೈವಿ. ಈತನ ಪತ್ನಿ ಪ್ರಮೀಳಾ ಎಂಬಾಕೆ ನಗರದ ವಾಸವಿ ರಸ್ತೆಯಲ್ಲಿನ ಲಕ್ಷ್ಮೀ ಮೆಡಿಕಲ್ ಸ್ಟೋರ್ ಮಾಲೀಕ ಬಾಬು ಎಂಬುವವರ ಮನೆಯಲ್ಲಿ ಹಲವು ದಿನಗಳಿಂದ ಕೆಲಸ ಮಾಡುತ್ತಿದ್ದಳು. ಇತ್ತೀಚಿಗೆ ಮಗನ ಓದಿನ ಸುಲುವಾಗಿ ಕೆಲಸಕ್ಕೆ ಬರಲು ಆಗುವುದಿಲ್ಲ ಎಂದು ಪ್ರಮೀಳಾ ಕೆಸಲ ಬಿಟ್ಟಿದ್ದಳು.
ಕೆಸಲ ಬಿಟ್ಟ 10 ದಿನಕ್ಕೆ ಬಾಬು ಮನೆಯಲ್ಲಿ ಚಿನ್ನದ ಸರ ಕಳವಾಗಿದೆ. ಮನೆ ಮಾಲೀಕರು ನಿನ್ನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ನಗರ ಠಾಣೆ ಪೊಲೀಸರು ಪ್ರಮೀಳಾ ಮತ್ತು ಈಕೆಯ ಗಂಡನನ್ನ ಠಾಣೆಗೆ ಕರೆದು ವಿಚಾರಣೆ ಮಾಡಿದ್ದರು. ಮನೆ ಮಾಲೀಕ ಬಾಬು ನೀಡಿದ್ದ ಮೌಖಿಕ ದೂರಿನ ಆಧಾರದಲ್ಲಿ ಪೊಲೀಸರು ಪ್ರಮೀಳಾ ದಂಪತಿಗೆ ಪದೇಪದೆ ಠಾಣೆಗೆ ಕರೆಸಿಕೊಂಡು ಹಾಗೂ ಮನೆ ಬಳಿ ಹೋಗಿ ವಿಚಾರಣೆ ಮಾಡಿ ಕಿರುಕುಳ ಕೊಡುತ್ತಿದ್ದರಂತೆ. ಬಾಬು ಕೂಡ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದರಂತೆ. ಶಿಡ್ಲಘಟ್ಟ ನಗರ ಠಾಣೆಯ ಅಪರಾಧ ವಿಭಾಗದ ಎಸ್‍ಐ ಪದ್ಮಾವತಿ ಅವರು 'ಪ್ರತಿ ತಿಂಗಳೂ 10 ಸಾವಿರ ಹಣ ಕೊಟ್ಟು ಕ್ಲಿಯರ್ ಮಾಡಿಕೋ, ಇಲ್ಲವಾದರೆ ಕಳ್ಳತನದ ಕೇಸು ಹಾಕಿ ಜೈಲಿಗೆ ಹಾಕುತ್ತೇನೆ' ಎಂದು ಪ್ರಮೀಳಾ ದಂಪತಿಗೆ ಬೆದರಿಕೆ ಹಾಕಿದ್ದರಂತೆ. ಇದಕ್ಕೆ ಮನನೊಂದ ವೆಂಕಟೇಶ್‍ಬಾಬು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವೆಂಕಟೇಶ್‍ಬಾಬು ಚಿಕಿತ್ಸೆ ಫಲಿಸದೆ ಭಾನುವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.