ನ್ಯೂಸ್

ಅತ್ಯಾಚಾರಿಗಳ ಪುರುಷತ್ವ ಶಕ್ತಿ ಹರಣಕ್ಕೆ ಪಾಕಿಸ್ತಾನ ಸಜ್ಜು

ಇಸ್ಲಾಮಾಬಾದ್​: ಅತ್ಯಾಚಾರ, ಲೈಂಗಿಕ ದೌರ್ಜನ್ಯವೆಸಗುವ ಕಾಮುಕರ ಪುರುಷತ್ವ ಶಕ್ತಿ ಹರಣ ಮಾಡಲು ಪಾಕಿಸ್ತಾನ ಸಜ್ಜಾಗಿದೆ.

ಇದಕ್ಕೆಂದೇ ಪಾಕಿಸ್ತಾನ ಸರ್ಕಾರ ಕಠಿಣ ಕಾನೂನು ಜಾರಿಗೆ ತಂದಿದೆ. ಅತ್ಯಾಚಾರ ಪ್ರಕರಣಗಳಲ್ಲಿ ಪದೇ ಪದೆ ಭಾಗಿಯಾಗುವ ಅಪರಾಧಿಗಳಿಗೆ ರಾಸಾಯನಿಕಗಳನ್ನು ಬಳಸಿ, ಅವರ ಪುರುಷತ್ವ ಶಕ್ತಿ ಹರಣ ಮಾಡುವ ಹೊಸ ಕಾಯ್ದೆಗೆ ಅಲ್ಲಿನ ರಾಷ್ಟ್ರಪತಿ ಆರಿಫ್ ಅಲ್ವಿ ಗುರುವಾರ ಸಹಿ ಹಾಕಿದ್ದಾರೆ.

ಇತ್ತೀಚೆಗೆ ಮಹಿಳೆಯರು ಹಾಗೂ ಮಕ್ಕಳ ಮೇಲೆ ಲೈಗಿಂಕ ದೌರ್ಜನ್ಯ ಹೆಚ್ಚುತ್ತಿದೆ ಎಂದು ಪಾಕಿಸ್ತಾನದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸರ್ಕಾರದ ಮೇಲೆ ಒತ್ತಡ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಮಸೂದೆ ರೂಪಿಸಿ, ಇತ್ತೀಚೆಗೆ ಅಲ್ಲಿನ ಸಂಸತ್​ನಲ್ಲಿ ಅಂಗೀಕಾರ ಪಡೆಯಲಾಗಿತ್ತು. ಇದಲ್ಲದೆ ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸಲು ವಿಶೇಷ ನ್ಯಾಯಾಲಯಗಳ ಸ್ಥಾಪನೆಗೂ ಕಾಯ್ದೆಯಲ್ಲಿ ನಿಯಮ ಮಾಡಲಾಗಿದೆ.

ಪಾಕಿಸ್ತಾನದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಶೇ.4 ಅಪರಾಧಿಗಳಿಗೆ ಮಾತ್ರ ಶಿಕ್ಷೆಯಾಗುತ್ತಿದೆ. ಬಹುತೇಕರು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಅನೇಕರು ಟೀಕೆ ವ್ಯಕ್ತಪಡಿಸಿದ್ದಾರೆ. ರಾಸಾಯನಿಕಗಳನ್ನು ನೀಡಿ ಅತ್ಯಾಚಾರಿಗಳ ಪುರುಷತ್ವ ಶಕ್ತಿ ಹರಣ ಮಾಡುವುದು ಅಮೆರಿಕ, ಉತ್ತರ ಕೊರಿಯಾ, ಪೋಲೆಂಡ್​, ಝೆಕ್​ ಗಣರಾಜ್ಯ ಇನ್ನಿತರ ರಾಜ್ಯಗಳಲ್ಲಿ ಈಗಾಗಲೇ ಕಾನೂನುಬದ್ಧಗೊಳಿಸಲಾಗಿದೆ.