ತಿರುಪತಿ ತಿಮ್ಮಪ್ಪನಿಗೆ ವರುಣನ ದಿಗ್ಬಂಧನ: ದೇವರ ದರ್ಶನ ಸ್ಥಗಿತ, ಕೊಚ್ಚಿಹೋದ ವಾಹನಗಳು, ನದಿಯಂತಾದ ರಸ್ತೆಗಳು

ತಿರುಪತಿಯಲ್ಲಿ ಮಹಾಪ್ರವಾಹ, ಭಯಾನಕ ದೃಶ್ಯ! - youtube
Published on

ತಿರುಮಲ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಸಾವಿರಾರು ವಾಹನಗಳು ಕೊಚ್ಚಿಹೋಗಿವೆ. ತಿರುಪತಿಯ ರಸ್ತೆಗಳು ಅಕ್ಷರಶಃ ನದಿಯಂತಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತಿರುಪತಿ ತಿಮ್ಮಪ್ಪನ ದೇವರ ದರ್ಶನ ಸ್ಥಗಿತಗೊಂಡಿದ್ದು, ಬೆಟ್ಟದಲ್ಲಿ ಬಾಕಿ ಆಗಿರುವ ಭಕ್ತರಿಗೆ ಊಟೋಪಹಾರದ ವ್ಯವಸ್ಥೆಯನ್ನು ಟಿಟಿಡಿ ಮಾಡಿದೆ.

ತಿರುಪತಿ ಪ್ರವಾಹಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್​ ಆಗಿವೆ. ಬೆಟ್ಟಗಳ ನಡುವೆ ನೀರು ಹರಿಯುತ್ತಿರುವ ಕಾರಣ ಬೆಟ್ಟ ಕರಗಿ, ಜಾರುತ್ತಿರುವ ದೃಶ್ಯವೂ ಕಂಡುಬಂದಿದೆ. ವ್ಯಕ್ತಿಯೊಬ್ಬ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿರುವ ದೃಶ್ಯ ಕೂಡ ವಿಡಿಯೋದಲ್ಲಿದೆ. ಸಾವು-ನೋವು, ನಾಶ-ನಷ್ಟಗಳನ್ನು ಇನ್ನೂ ಅಂದಾಜಿಸಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ತಿರುಪತಿಯ ಹಲವೆಡೆ ರಸ್ತೆಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತಿರುಪತಿ ದೇಗುಲ ಕಳೆದ ಎರಡು ದಿನ ಬಂದ್​ ಆಗಿತ್ತು. ಇಂದು(ನ.19) ಕೂಡ ಭಕ್ತರಿಗೆ ದೇಗುಲ ದರ್ಶನಕ್ಕೆ ಅವಕಾಶ ಇಲ್ಲ. ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಬೆಟ್ಟ ಏರುವ ಕಾಲುದಾರಿ ಮತ್ತು ಘಾಟಿ ರಸ್ತೆ ಕೂಡ ಬಂದ್​ ಮಾಡಲಾಗಿದೆ. ಬೆಟ್ಟದಲ್ಲಿ ಬಾಕಿ ಆಗಿರುವ ಭಕ್ತರಿಗೆ ಊಟೋಪಹಾರದ ವ್ಯವಸ್ಥೆಯನ್ನ ಟಿಟಿಡಿ ಮಾಡಿದೆ.

ತಿರುಪತಿ, ತಿರುಮಲ ಮತ್ತು ಮಧುರಾ ನಗರ, ಗೊಲ್ಲವಾಣಿ ಗುಂಟ, ಲಕ್ಷ್ಮೀಪುರಂ, ಏರ್​ ಬೈಪಾಸ್​ ರೋಡ್​, ಚಂದ್ರಗಿರಿ ಪಟ್ಟಣ ಮತ್ತು ಕಪಿಲಾ ತೀರ್ಥಂ ದೇವಸ್ಥಾನಗಳಿರುವ ಪ್ರದೇಶ ಜಲಾವೃತವಾಗಿದೆ. ನೀರಿನ ಮಟ್ಟ ಏರುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಅನೇಕರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net