ಕೋಳಾಲಮ್ಮ ದೇಗುಲದ ಶ್ರೀಧರಮ್ಮ- ಅರ್ಚಕ ಆತ್ಮಹತ್ಯೆ ಕೇಸ್​ಗೆ ಸ್ಫೋಟಕ ತಿರುವು: ಮತ್ತೊಂದು ವಿಡಿಯೋ ವೈರಲ್​

chintamani kolalamma devi shridharamma
Published on

ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಗುಟ್ಟಹಳ್ಳಿ ಶ್ರೀ ಆದಿಶಕ್ತಿ ಕೋಳಾಲಮ್ಮ ದೇವಿ ಟ್ರಸ್ಟ್​ನ ಧರ್ಮದರ್ಶಿ ಶ್ರೀಮಾತೃ ಸ್ವರೂಪಿಣಿ ಅಮ್ಮ(ಶ್ರೀಧರಮ್ಮ) ಮತ್ತು ಅರ್ಚಕ ಲಕ್ಷ್ಮೀಪತಿ ಇಬ್ಬರೂ ಒಂದೇ ದಿನ ಮೃತಪಟ್ಟಿದ್ದ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.

ಇವರಿಬ್ಬರ ಸಾವು ಜಿಲ್ಲೆಯಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಇವರಿಬ್ಬರ ಸಾವಿನ ಸುತ್ತ ಬೆಳೆದಿದ್ದ ಅನುಮಾನದ ಹುತ್ತವನ್ನು ದೇವಾಲದ ಆವರಣದಲ್ಲಿ ಸಿಕ್ಕಿದ್ದ ಡೆತ್​ನೋಟ್​ ಮತ್ತು ಸಾವಿಗೂ ಮುನ್ನ ಇವರಿಬ್ಬರೂ ಮಾಡಿದ್ದ ವಿಡಿಯೋ ತಕ್ಕ ಮಟ್ಟಿಗೆ ಕರಗಿಸಿದೆಯಾದರೂ 'ಅನಿಲ್​' ಎಂಬಾತನ ಹೆಸರು ತಳಕು ಹಾಕಿಕೊಂಡಿದೆ.

12ನೇ ವಯಸ್ಸಿಗೆ ದೇವರ ಆರಾಧಕರಾಗಿದ್ದ ಶ್ರೀಧರಮ್ಮ, ದೇವರ ಕಾರ್ಯಗಳಿಂದ ಅಸಂಖ್ಯಾತ ಭಕ್ತವೃಂದ ಹಾಗೂ ಶಿಷ್ಯವೃಂದ ಗಳಸಿದ್ದರು. ಮಂಗಳಮುಖಿಯಾಗಿ ಪರಿವರ್ತನೆಯಾಗಿದ್ದ ಶ್ರೀಧರ್ ಮುಂದೆ ಶ್ರೀಧರಮ್ಮ ಎಂದೇ ಪರಿಚಿತವಾದರು. ಈ ಭಾಗದಲ್ಲಿ ಭಕ್ತರ ಇಷ್ಟಾರ್ಥಗಳನ್ನ ಈಡೇರಿಸೋ ದೇವಿ, ಅಸಂಖ್ಯಾತ ಭಕ್ತರ ಪಾಲಿಗೆ ನೆಚ್ಚಿನ ಅಮ್ಮಾ ಕೂಡ ಆಗಿದ್ದರು. ನಿತ್ಯ ಭಕ್ತ ಸಮೂಹವನ್ನ ಸೆಳೆಯುತ್ತಿದ್ದ ಶ್ರೀಧರಮ್ಮ, ಗುಟ್ಟಹಳ್ಳಿ ಬಳಿ ಶ್ರೀ ಆದಿಶಕ್ತಿ ಕೋಳಾಲಮ್ಮದೇವಿ, ಶ್ರೀ ಮುನೇಶ್ವರಸ್ವಾಮಿ ದೇವಾಲಯ ಹೆಸರಲ್ಲಿ ಟ್ರಸ್ಟ್ ಮಾಡಿಕೊಂಡು ಭಕ್ತರ ಸೇವಾಕಾರ್ಯ ಮಾಡುತ್ತಿದ್ದರು. ಇವರ ಜತೆ ಶಿಷ್ಯ ಲಕ್ಷ್ಮೀಪತಿ ಕೂಡ ಇದ್ದರು. ಇದ್ದಕ್ಕಿದ್ದಂತೆ ನ.11ರ ರಾತ್ರಿ ಅದೇನಾಯಿತೋ ಏನೋ… ಇದ್ದಕ್ಕಿದ್ದಂತೆ ಶ್ರೀಧರಮ್ಮ ಮತ್ತು ಲಕ್ಷ್ಮೀಪತಿ ಇಬ್ಬರ ಶವಗಳು ನ.12ರ ಬೆಳಗ್ಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಸ್ಥಳ ಪರಿಶೀಲಿಸಿ ತನಿಖೆ ಕೈಗೊಂಡ ಪೊಲೀಸರಿಗೆ ಆಲಯದಲ್ಲಿ ಡೆತ್​ನೋಟ್​ ಸಿಕ್ಕಿತ್ತು. ಅಲ್ಲದೆ ಮೃತರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಾಡಿದರೆನ್ನಲಾದ 2 ವಿಡಿಯೋ ವೈರಲ್​ ಆಗಿದೆ. ''ಜೀವನದಲ್ಲಿ ತುಂಬಾ ಜುಗುಪ್ಸೆಯಾಗುತ್ತಿದೆ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಕಾಲಿನ ಕಾಲುಂಗುರವನ್ನು ತೆಗೆಯಬೇಡಿ. ಚೆನ್ನಾಗಿ ಅಂತ್ಯಸಂಸ್ಕಾರ ಮಾಡಿ' ಎಂಬುದಾಗಿ ಮಾತೃ ಸ್ವರೂಪಿಣಿ ಅಮ್ಮ ಹೇಳಿದ್ದಾರೆ. ಮತ್ತೊಂದು ವಿಡಿಯೋದಲ್ಲಿ 'ಮಾತೃ ಸ್ವರೂಪಿಣಿ ಅಮ್ಮನವರನ್ನು ಬಿಟ್ಟು ಇರಲು ಆಗುತ್ತಿಲ್ಲ. ಅವರ ಜತೆ ನಾನೂ ಹೋಗುತ್ತಿದ್ದೇನೆ. ಅಪ್ಪ ನನ್ನನ್ನು ಕ್ಷಮಿಸಿ, ಮನೆಯಲ್ಲಿರುವವರನ್ನು ಚೆನ್ನಾಗಿ ನೋಡಿಕೊಳ್ಳಿ, ನನಗೆ ದುಃಖವಾಗುತ್ತಿದೆ. ಆದರೆ, ನನ್ನ ಅಜ್ಜಿ ಬಳಿಗೆ ಹೋಗುತ್ತಿದ್ದೇನೆ' ಎಂದು ಅರ್ಚಕ ಲಕ್ಷ್ಮೀಪತಿ ಹೇಳಿರುವುದು ವಿಡಿಯೋದಲ್ಲಿದೆ. ಇಷ್ಟೆಲ್ಲಾ ಬೆಳವಣಿಗೆ ಬಳಿಕ ಅನಿಲ್​ ಎಂಬಾತನ ಹೆಸರು ಕೇಳಿಬಂದಿದೆ.

ಯಾರೀತ ಅನಿಲ್​?: ಮಾತೃ ಸ್ವರೂಪಿಣಿ ಅಮ್ಮನ ಮೊದಲು ಹೆಸರು ಶ್ರೀಧರ್​. ತೃತೀಯ ಲಿಂಗಿಯಾಗಿ ಪರಿವರ್ತನೆಯಾಗಿ ಆಗಾಗ ನನ್ನ ಮೇಲೆ ದೇವತೆ ಬರುತ್ತಿರುತ್ತಾಳೆ ಎಂಬುದಾಗಿ ಹೇಳುತ್ತಿದ್ದರು. ತನ್ನದೇ ಭಕ್ತ ವೃಂದವನ್ನು ಗಳಿಸಿದ್ದರು. ಇದರ ನಡುವೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಸಮೀಪದ ಕಣ್ಣೂರಿನ ಅನಿಲ್​ ಎಂಬಾತ ಕೊಳಲಮ್ಮ ದೇವಾಲಯದ ಅಭಿವೃದ್ಧಿಗೆ ಕೈ ಜೋಡಿಸಿದ್ದು, ಹಲವು ತಿಂಗಳಿಂದ ಧಾರ್ಮಿಕ ಮತ್ತು ಸೇವಾ ಚಟುವಟಿಕೆಯಲ್ಲಿ ಉಸ್ತುವಾರಿ ವಹಿಸಿದ್ದರು. ಅನಿಲ್​ಗೆ ಮನೆಯಲ್ಲಿ ಮದುವೆ ಮಾಡಲು ಮುಂದಾದಾಗ ಮಾತೃ ಸ್ವರೂಪಿಣಿ ಅಮ್ಮ ಒಪ್ಪಿಕೊಳ್ಳದಂತೆ ಸಲಹೆ ನೀಡಿದ್ದರು. ಇದನ್ನು ನಿರಾಕರಿಸಿ ಹುಡುಗಿ ನೋಡಲು ಹೋದ ಅನಿಲ್​ ಮತ್ತೆ ಆಲಯದ ಕಡೆಗೆ ಗಮನಹರಿಸಿರಲಿಲ್ಲ. ಇದರಿಂದ ಮನನೊಂದ ಅಮ್ಮ ಆತ್ಮಹತ್ಯೆ ನಿರ್ಧರಿಸಿದಾಗ ಅರ್ಚಕ ಲಕ್ಷ್ಮೀಪತಿ ಕೂಡ ಅವರೊಟ್ಟಿಗೆ ಸೇರಿಕೊಂಡು ಸಾವಿನ ಮನೆಯ ಕದ ತಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಅಂತರ ಕಾಪಾಡಿಕೊಂಡ ಅನಿಲ್​: ಮದುವೆ ಸಿದ್ಧತೆಯಲ್ಲಿ ತೊಡಗಿದ್ದ ಅನಿಲ್​ ದೇವಾಲಯದಿಂದ ಅಂತರ ಕಾಪಾಡಿಕೊಂಡಿದ್ದ. ಮೊಬೈಲ್​ ಅನ್ನು ಸ್ವಿಚ್​ಅಫ್​ ಮಾಡಿದ್ದು ಅಮ್ಮನವರ ಪ್ರತಿಕ್ರಿಯೆಗೆ ಸ್ಪಂದಿಸುತ್ತಿರಲಿಲ್ಲ. ಅನಿಲ್​ ಮದುವೆಯಾದರೆ ಆಲಯದ ಅಭಿವೃದ್ಧಿಯಾಗುವುದಿಲ್ಲ. ಇನ್ನು ಮುಂಬರುವ ದಿನಗಳಲ್ಲೂ ದೂರವಾಗುತ್ತಾನೆ ಎಂಬ ಕೊರಗು ಅಮ್ಮನನ್ನು ಕಾಡಿತ್ತು ಎನ್ನಲಾಗಿದೆ. ಅನಿಲ್​ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದು, ಕಳೆದ ಕೆಲ ದಿನಗಳಿಂದ ಮದುವೆ ಸಿದ್ಧತೆಯ ಒತ್ತಡದಲ್ಲಿದ್ದೆ. ದೇವಾಲಯದ ಅಭಿವೃದ್ಧಿಗೆ ಒತ್ತು ನೀಡಲಾಗಿತ್ತೇ ವಿನಃ ಬೇರೆ ಏನೂ ಸಂಬಂಧ ಹೊಂದಿರಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದ ವಿಡಿಯೋ ಕೂಡ ಹೊರಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net